Asianet Suvarna News Asianet Suvarna News

ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ: ಸರ್ಕಾರದಿಂದ ಫ್ರೀ ಟ್ಯಾಬ್‌

ಈ ವರ್ಷ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ| ಡಿಜಿಟಲ್‌ ಕಲಿಕೆ ವ್ಯಾಪಕವಾಗಿ ಉತ್ತೇಜಿಸುವ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಗುಣಮಟ್ಟದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಕ್ರಮ| ವಿವಿಧ ಕಾಲೇಜುಗಳಲ್ಲಿ 5500 ತರಗತಿ ಕೊಠಡಿಗಳನ್ನು ಸ್ಮಾರ್ಟ್‌ ಕ್ಲಾಸ್‌ಗಳಾಗಿ ಅಭಿವೃದ್ಧಿ| 

Free Tab for Degree Students in Government Colleges grg
Author
Bengaluru, First Published Dec 26, 2020, 10:32 AM IST

ಬೆಂಗಳೂರು(ಡಿ.26): ರಾಜ್ಯದ ಎಲ್ಲಾ ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಉತ್ತಮ ಆಡಳಿತ ದಿನ ಕಾರ್ಯಕ್ರಮದಲ್ಲಿ ‘ಉನ್ನತ ಶಿಕ್ಷಣದಲ್ಲಿ ಜಾಗತಿಕ ಮಟ್ಟದ ಸಿದ್ಧತೆ’ ವಿಚಾರಗೋಷ್ಠಿಯಲ್ಲಿ ಆಯುಕ್ತರು ಈ ಮಾಹಿತಿ ನೀಡಿದರು.

ಪ್ರಸಕ್ತ 2020-21ರ ಶೈಕ್ಷಣಿಕ ವರ್ಷದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳು, 14 ಸರ್ಕಾರಿ ಎಂಜನಿಯರಿಂಗ್‌ ಕಾಲೇಜುಗಳಲ್ಲಿನ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ಹಾಗೂ 87 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಓದುತ್ತಿರುವ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್‌ಗಳನ್ನು ನೀಡಲಾಗುತ್ತಿದೆ. ಡಿಜಿಟಲ್‌ ಕಲಿಕೆಯನ್ನು ವ್ಯಾಪಕವಾಗಿ ಉತ್ತೇಜಿಸುವ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಬದಲು ಟ್ಯಾಬ್‌..!

155.4 ಕೋಟಿ ರೂ. ವೆಚ್ಚ:

ಟ್ಯಾಬ್ಲೆಟ್‌ಗಳ ಖರೀದಿಗೆ ಒಟ್ಟು 155.4 ಕೋಟಿ ರು. ವೆಚ್ಚವಾಗಲಿದೆ. ಪ್ರತಿ ಟ್ಯಾಬ್ಲೆಟ್‌ ಬೆಲೆ 10 ಸಾವಿರ ರು. ಇರಲಿದೆ. ಒಂದು ವೇಳೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಈ ಟ್ಯಾಬ್‌ಗಳು ಪೂರಕವಾಗದಿದ್ದರೆ ಅಡ್ವಾನ್ಸ್‌$್ಡ ವರ್ಷನ್‌ ಲ್ಯಾಪ್‌ಟಾಪ್‌ ಖರೀದಿಗೆ ಕಾಲೇಜುಗಳ ಮೂಲಕವೇ ಶಿಕ್ಷಣ ಸಾಲಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

5500 ಸ್ಮಾರ್ಟ್‌ ಕ್ಲಾಸ್‌:

ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್‌ ಅಥವಾ ಆನ್‌ಲೈನ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮಾಡಲು ಸೂಕ್ತ ರೀತಿಯಲ್ಲಿ ಅಂತರ್ಜಾಲ ಸಂಪರ್ಕ ದೊರಕುವಂತೆ ಮಾಡಲು ಎಲ್ಲ ಟೆಲಿಕಾಂ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಇನ್ನು ಸರ್ಕಾರಿ ಸ್ವಾಮ್ಯದ ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ನಡೆಸಲು ಹಾಗೂ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಹೈ-ಸ್ಪೀಡ್‌ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ವಿವಿಧ ಕಾಲೇಜುಗಳಲ್ಲಿ 5500 ತರಗತಿ ಕೊಠಡಿಗಳನ್ನು ಸ್ಮಾರ್ಟ್‌ ಕ್ಲಾಸ್‌ಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ತರಗತಿ ಕೊಠಡಿಗಳನ್ನೂ ಸ್ಮಾರ್ಟ್‌ ಕ್ಲಾಸ್‌ಗಳಾಗಲಿವೆ. ಈ ವ್ಯವಸ್ಥೆಗಾಗಿ ಪ್ರೊಜೆಕ್ಟರ್‌ ಸೇರಿದಂತೆ ಇತರೆ ತಾಂತ್ರಿಕ ಉಪಕರಣಗಳನ್ನು ಒದಗಿಸಲಾಗುತ್ತಿದ್ದು ಆಡಿಯೋ, ವಿಡಿಯೋ ಸಹಿತ ಪಠ್ಯ ಬೋಧನೆ ಇದರಿಂದ ಸಾಧ್ಯವಾಗಲಿದೆ ಎಂದು ಆಯುಕ್ತ ಪ್ರದೀಪ್‌ ವಿವರಿಸಿದರು. ಈ ಗೋಷ್ಠಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, ಲ್ಯಾಬ್‌ ಇನ್‌ ಆ್ಯಪ್‌ನ ಪವನ್‌ ಶಿಂದೆ ಪಾಲ್ಗೊಂಡಿದ್ದರು.

Follow Us:
Download App:
  • android
  • ios