ಸಮಯದ ಪ್ರತಿ ಕ್ಷಣ ಅತ್ಯಂತ ಮಹತ್ವದ್ದು: ಸುಧಾಮೂರ್ತಿ
ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಪುನರ್ಮನನ ಕಾರ್ಯಕ್ರಮ| ತಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿದ ಕಾಲೇಜಿಗೆ ವಿದ್ಯಾರ್ಥಿಗಳು ಕೃತಜ್ಞರಾಗಿರಬೇಕು| ಶಿಕ್ಷಣ ಮುಗಿಸಿ ಹೊರ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಬದುಕನ್ನು ಧೈರ್ಯವಾಗಿ ಎದುರಿಸಲು ಕಲಿಯಬೇಕು|
ಬೆಂಗಳೂರು(ಫೆ.14):ಜಗತ್ತಿನ ಪ್ರತಿ ಹನಿ ನೀರು, ಸಮಯದ ಪ್ರತಿ ಕ್ಷಣ ಅತ್ಯಂತ ಮಹತ್ವದ್ದು. ಸಿಗುವ ಸಮಯವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಹೊಸ ಪರೀಕ್ಷೆ, ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಇಸ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಸಲಹೆ ನೀಡಿದ್ದಾರೆ.
ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಹಮ್ಮಿಕೊಂಡಿದ್ದ 75ನೇ ತಂಡದ ಪುನರ್ಮನನ ಕಾರ್ಯಕ್ರಮದಲ್ಲಿ ವರ್ಚುವಲ್ ಮಾಧ್ಯಮ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯನ ಜೀವನದ ಮಹತ್ವದ ಬದಲಾವಣೆಗಳಿಗೆ ಕಾರಣವಾದ ಆವಿಷ್ಕಾರಗಳಿಗೆ ಎಂಜಿನಿಯರಿಂಗ್ ಶಿಕ್ಷಣ ಬುನಾದಿ ಆಗಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚು ಜವಾಬ್ದಾರಿ ಹೊಂದಿರಬೇಕು. ಶಿಕ್ಷಣ ಮುಗಿಸಿ ಹೊರ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಬದುಕನ್ನು ಧೈರ್ಯವಾಗಿ ಎದುರಿಸಲು ಕಲಿಯಬೇಕು. ಆಪ್ತರೊಂದಿಗೆ ಸಮಯ ಕಳೆಯಲು ಹಾಗೂ ಮನರಂಜನೆಗೆ ಕೂಡ ಸಮಯ ಮೀಸಲಿರಿಸಬೇಕು. ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಂತ್ರಾಲಯ ಸ್ನಾನಘಟ್ಟಕ್ಕೆ ಸುಧಾಮೂರ್ತಿ 13 ಕೋಟಿ ದೇಣಿಗೆ
ಕಾಲೇಜು ಶಿಕ್ಷಣ ಮುಗಿಸಿ, ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನೆಡೆಗೆ ಸಾಗುವ ವಿದ್ಯಾರ್ಥಿಗಳು, ತಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿದ ಕಾಲೇಜಿಗೆ ಕೃತಜ್ಞರಾಗಿರಬೇಕು. ಹೊಸ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಇತರ ಯೋಜನೆಗಳ ಮೂಲಕ ತಮ್ಮ ಕೈಲಾದಷ್ಟು ನೆರವು ಒದಗಿಸಬೇಕು. ವಿದೇಶಗಳ ಬಹುದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಅದರ ಹಳೆಯ ವಿದ್ಯಾರ್ಥಿಗಳೇ ಮುನ್ನಡೆಸುತ್ತಿದ್ದಾರೆ. ಇದು ನಮಗೂ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಂಎಸ್ ಶಿಕ್ಷಣ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಡಾ. ಬಿ.ಎಸ್.ರಾಗಿಣಿ ನಾರಾಯಣ್, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಾ. ಪಿ.ದಯಾನಂದ ಪೈ, ಬಿಎಂಎಸ್ ಕಾನೂನು ಕಾಲೇಜಿನ ಅಧ್ಯಕ್ಷ ಎಂ.ಮದನ್ ಗೋಪಾಲ್, ಬಿಎಂಎಸ್‌ಇಟಿ ನಿರ್ದೇಶಕ ಅಡ್ಮಿನ್ ಮುರಳಿ ಕೃಷ್ಣ, ಪ್ರಾಂಶುಪಾಲ ಡಾ. ಬಿ.ವಿ.ರವಿಶಂಕರ್, ಉಪ ಪ್ರಾಂಶುಪಾಲ ಡಾ. ಎಸ್.ಮುರಳೀಧರ, ಶೈಕ್ಷಣಿಕ ವಿಭಾಗದ ಡೀನ್ ಡಾ. ಸಮಿತಾ ಮೈತ್ರಾ ಮತ್ತಿತರರು ಉಪಸ್ಥಿತರಿದ್ದರು.