Asianet Suvarna News Asianet Suvarna News

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌

ಸಿಇಟಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ವರ್ಷ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್‌-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದ್ದಾರೆ. 

Engineering seat is 10 Percent more expensive Says Minister Dr MC Sudhakar gvd
Author
First Published Jun 16, 2023, 4:23 AM IST

ಬೆಂಗಳೂರು (ಜೂ.16): ಸಿಇಟಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ವರ್ಷ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್‌-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಮಾಹಿತಿ ನೀಡಿದರಲ್ಲದೆ, ಈ ಶುಲ್ಕ ಹೆಚ್ಚಳ ಕಾಂಗ್ರೆಸ್‌ ಸರ್ಕಾರದ ನಿರ್ಧಾರವಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲೇ ತೀರ್ಮಾನ ಆಗಿತ್ತು ಎಂದು ಸ್ಪಷ್ಟಪಡಿಸಿದರು.

ಹಾಗಾದರೆ ಬಿಜೆಪಿ ಸರ್ಕಾರದ ಅವಧಿಯ ಶುಲ್ಕ ಹೆಚ್ಚಳ ನಿರ್ಧಾರವನ್ನು ಹಿಂಪಡೆಯುವ ಚಿಂತನೆ ಇದೆಯಾ ಎಂಬ ಪ್ರಶ್ನೆಗೆ, ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲೇ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘಟನೆಗಳೊಂದಿಗೆ ಚರ್ಚಿಸಿ ಶುಲ್ಕ ಹೆಚ್ಚಳದ ನಿರ್ಧಾರ ಮಾಡಿತ್ತು. ನಿಯಮಾನುಸಾರವೇ ಶುಲ್ಕ ಹೆಚ್ಚಳ ಮಾಡಿರುವುದರಿಂದ ಇದನ್ನು ಪರಿಷ್ಕರಿಸಿ ಮತ್ತೆ ಕಡಿಮೆ ಮಾಡುವ ಅಥವಾ ಹಿಂಪಡೆಯುವ ಪ್ರಶ್ನೆ ಇಲ್ಲ. ಶೀಘ್ರವೇ ಶೇ.10ರಷ್ಟು ಶುಲ್ಕ ಹೆಚ್ಚಳದ ಅನುಸಾರ ಪರಿಷ್ಕೃತ ಶುಲ್ಕದ ಮಾಹಿತಿ ಪ್ರಕಟಿಸುವುದಾಗಿ ಕೂಡ ಸ್ಪಷ್ಟಪಡಿಸಿದ್ದಾರೆ.

ಸಾವರ್ಕರ್‌, ಹೆಗ್ಡೇವಾರ್‌ ಪಾಠ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಚಿವ ಸುನಿಲ್‌ ಕಿಡಿ

ಪ್ರಾಧಿಕಾರದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಶುಲ್ಕ 64,686 (ವರ್ಗ 1)/.71,896 (ವರ್ಗ 2) ಇದೆ. ಈ ಬಾರಿ 53 ಸಾವಿರ ಸೀಟುಗಳು ಈ ಕೋಟಾದಡಿ ಲಭ್ಯವಿದ್ದು ಇವುಗಳನ್ನು ಸಿಇಟಿ ರಾರ‍ಯಂಕಿಂಗ್‌ ಮೂಲಕ ಭರ್ತಿ ಮಾಡಲಾಗುತ್ತದೆ. ಅದೇ ರೀತಿ ಕಾಮೆಡ್‌-ಕೆ ಕೋಟಾ ಸೀಟುಗಳ ಪ್ರವೇಶಕ್ಕೆ 1,58,123 (ವರ್ಗ1), .2,22,156 (ವರ್ಗ 2) ಇದೆ. ಇದಕ್ಕೆ ಶೇ.10ರಷ್ಟು ಹೆಚ್ಚುವರಿ ಶುಲ್ಕವನ್ನು ಈ ಬಾರಿ ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ. 

ಖಾಸಗಿ ಕಾಲೇಜುಗಳಿಗೆ ಸರ್ಕಾರ ಎರಡು ವರ್ಗದ ಶುಲ್ಕದ ಅವಕಾಶ ನೀಡಿರುತ್ತದೆ. ಸರ್ಕಾರಿ ಕೋಟಾ ಸೀಟುಗಳಿಗೆ ವರ್ಗ 1ರಲ್ಲಿ ಕಡಿಮೆ ಶುಲ್ಕ ಪಡೆಯಲು ಒಪ್ಪಿದರೆ ಕಾಮೆಡ್‌ಕೆ ಸೀಟುಗಳಿಗೆ ವರ್ಗ 2ನಲ್ಲಿ ಹಚ್ಚು ಶುಲ್ಕ ಪಡೆಯಲು ಅವಕಾಶವಿರುತ್ತದೆ. ಅದೇ ರೀತಿ ಸರ್ಕಾರಿ ಕೋಟಾ ಸೀಟುಗಳಿಗೆ ವರ್ಗ 2ರಲ್ಲಿ ಹೆಚ್ಚು ಶುಲ್ಕ ಪಡೆಯಲು ಒಪ್ಪಿದರೆ ಕಾಮೆಡ್‌-ಕೆ ಸೀಟುಗಳಿಗೆ ವರ್ಗ 1ರಡಿ ಕಡಿಮೆ ಶುಲ್ಕ ಪಡೆಯಬೇಕಾಗುತ್ತದೆ.

ಈ ಬಾರಿ ಒಟ್ಟು 1.11 ಲಕ್ಷ ಬಿಇ ಸೀಟು ಲಭ್ಯ: ರಾಜ್ಯದ ಸರ್ಕಾರಿ, ಖಾಸಗಿ, ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಟ್ಟಾರೆ ಈ ಬಾರಿ 1.11 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಪ್ರವೇಶಕ್ಕೆ ಲಭ್ಯವಿದೆ. ಈ ಪೈಕಿ 53,248 ಸೀಟುಗಳು ಸರ್ಕಾರಿ ಕೋಟಾದಡಿ ಸಿಇಟಿ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲು ಲಭ್ಯವಾಗಲಿವೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು. ಉಳಿದಂತೆ ಕಾಮೆಡ್‌-ಕೆ ಮೂಲಕ 25,171 ಸೀಟು, ಮ್ಯಾನೇಜ್‌ಮೆಂಟ್‌ ಕೋಟಾದಡಿ 33,463 ಎಂಜಿನಿಯರಿಂಗ್‌ ಸೀಟುಗಳು ಪ್ರವೇಶಕ್ಕೆ ಲಭ್ಯವಿವೆ ಎಂದು ತಿಳಿಸಿದರು.

ಶೇ.10 ಏರಿಕೆ ಬಳಿಕ ಶುಲ್ಕ ಎಷ್ಟು?
-ಕೋಟಾ ಹಾಲಿ ಶುಲ್ಕ(ವರ್ಗ 1/ವರ್ಗ 2) 10% ಹೆಚ್ಚಳ
-ಕೆಸಿಇಟಿ 64,686/71, 896 71, 155/78,344
-ಕಾಮೆಡ್‌-ಕೆ 1,58,123/2,22,156 1,73,935/2,44,372

ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ಸಿಇಟಿ ಫಲಿತಾಂಶದ ಮೂಲಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮೂಲಕ ಇನ್ನೊಂದು ವಾರದಲ್ಲಿ ಸಿಇಟಿ ಕೌನ್ಸೆಲಿಂಗ್‌ಗೆ ವೇಳಾಪಟ್ಟಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಕೌನ್ಸೆಲಿಂಗ್‌ ಆರಂಭಕ್ಕೆ ಮೊದಲೇ ಕಾಮೆಡ್‌-ಕೆ ಕೌನ್ಸೆಲಿಂಗ್‌ ಆರಂಭಿಸದಂತೆ ಕಾಮೆಡ್‌-ಕೆ ಅವರಿಗೆ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಆತಂಕ ಬೇಡ.
- ಡಾ.ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ

Follow Us:
Download App:
  • android
  • ios