ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ: 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬಗ್ಗೆ ಮಾಹಿತಿ
ಶಾಲಾ-ಕಾಲೇಜು ಪ್ರಾರಂಭ ಮಾಡಲಾಗಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ಜ.01): ಕೊರೋನಾ ಭೀತಿ ನಡುವೆಯೂ ರಾಜ್ಯದಲ್ಲಿ ಶಾಲೆ-ಕಾಲೇಜು ಪ್ರಾರಂಭಿಸಲಾಗಿದೆ. ಕಳೆದ 8 ತಿಂಗಳು ನಂತರ ಇಂದು (ಶುಕ್ರವಾರ) ಶಾಲಾ-ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳು ಅಷ್ಟೇ ಉತ್ಸಾಹದಿಂದ ಹಾಜರಾಗಿದ್ದರು.
ಇನ್ನು ಈ ಬಗ್ಗೆ ಪ್ರಾಥಮಿ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠೆಗೆ ಶಾಲೆ ಪ್ರಾರಂಭ ಮಾಡಿಲ್ಲ. ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿ ಶಾಲಾ-ಕಾಲೇಜುಗಳು ಪ್ರಾರಂಭ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ತರಗತಿ ಪ್ರಾರಂಭ ಮಾಡಿದ್ದೇವೆ. ಯಾವುದೇ ಲೋಪ ಆದ್ರು ಅಧಿಕಾರಿಗಳು ಕ್ರಮವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮುಂದೂಡಲಾಗಿದ್ದ 10, 12ನೇ ತರಗತಿ ಪರೀಕ್ಷೆ ದಿನಾಂಕ ಪ್ರಕಟ
ಇನ್ನು ಇದೇ ವೇಳೆ ಪಠ್ಯ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಷ್ಟು ಸಮಯ ನಮಗೆ ಪಾಠ ಮಾಡಲು ಸಿಗುತ್ತೆ ಅಂತ ಲೆಕ್ಕ ಹಾಕ್ತೀವಿ. ಈಗಾಗಲೇ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸೋಮವಾರ ಅಥವಾ ಮಂಗಳವಾರ ನಾವು ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
10 ಮತ್ತು 12 ನೇ ತರಗತಿ ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿ ಮಂಗಳವಾರ ಮತ್ತು ಬುಧವಾರ ಬಿಡುಗಡೆ ಮಾಡುತ್ತೇವೆ. ಪರೀಕ್ಷೆ ಅಗತ್ಯವಾದ ಪಠ್ಯ ಮಾತ್ರ ಕೊಡುತ್ತೇವೆ. ಮಕ್ಕಳಿಗೆ ಒತ್ತಡ ಆಗದಷ್ಟು, ಮುಂದಿನ ತರಗತಿಗೆ ಅಗತ್ಯವಾಗಿ ಬೇಕಾಗುವ ಪಠ್ಯ ಕೊಡ್ತೀವಿ. ಮಕ್ಕಳು ಒತ್ತಡಕ್ಕೆ ಒಳಗಾಗೋದು ಬೇಡ ಎಂದು ಮನವಿ ಮಾಡಿದರು.