* SSLC ಫಲಿತಾಂಶದಲ್ಲಿ ಗ್ರೇಡ್‌ ಜತೆ ಅಂಕ* -ಅಂಕ ನೀಡದಿದ್ದರೆ ‘ಕೋವಿಡ್‌ ಬ್ಯಾಚ್‌’ ಎಂದು ಮುಜುಗರ* ವಿಡಿಯೋ ಸಂವಾದದಲ್ಲಿ ವಿದ್ಯಾರ್ಥಿಗಳ ಅಳಲು 

ಬೆಂಗಳೂರು(ಜು.10): ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಗ್ರೇಡ್‌ ನೀಡುವ ಜತೆಗೆ ಅಂಕಗಳನ್ನು ನೀಡುವ ಸಂಬಂಧ ಕ್ರಮ ವಹಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

ಜು.19 ಮತ್ತು 22ರಂದು ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಆತ್ಮಸ್ಥೈರ್ಯ ತುಂಬಲು ಸಚಿವರು, ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅನೇಕ ಮಕ್ಕಳು ‘ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದರಿಂದ ನಾವು ‘ಪರೀಕ್ಷೆ ಇಲ್ಲದೆ ಪಾಸ್‌ ಆದ ಕೋವಿಡ್‌ ಬ್ಯಾಚ್‌ನ ವಿದ್ಯಾರ್ಥಿಗಳು’ ಎಂಬ ಮುಜುಗರ ತಪ್ಪಿದಂತಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನೂ ಕೂಡ ಪ್ರತಿ ವರ್ಷದಂತೆ ಗ್ರೇಡ್‌ ಜತೆಗೆ ಅಂಕಗಳನ್ನೂ ನೀಡಿ ಮುಜುಗರದಿಂದ ಸಂಪೂರ್ಣ ದೂರ ಮಾಡಿ ಎಂಬ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸರ್ಕಾರ ಪರೀಕ್ಷೆ ನಡೆಸುತ್ತಿರುವುದಕ್ಕೆ ಎಲ್ಲ ವಿದ್ಯಾರ್ಥಿಗಳೂ ಹರ್ಷ ವ್ಯಕ್ತಪಡಿಸಿದ್ದು, ಪರೀಕ್ಷೆ ಇಲ್ಲದೆ ಪಾಸ್‌ ಆದವರೆಂಬ ಭಾವನೆ ಜೀವನ ಪೂರ್ತಿ ಉಳಿಯುವುದು ತಪ್ಪಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ರಾಜ್ಯದಲ್ಲಿ SSLC ಪರೀಕ್ಷೆ ನಡೆಸಬಾರದು : ಎಚ್.ವಿಶ್ವನಾಥ್ ಒತ್ತಾಯ

ಒಟ್ಟು 34 ಶೈಕ್ಷಣಿಕ ಜಿಲ್ಲೆಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. 93 ಮಂದಿ ಚರ್ಚೆಯಲ್ಲಿ ಭಾಗಿಯಾಗಿ ವಿವಿಧ ಸಮಸ್ಯೆಗಳನ್ನು ಗಮನಕ್ಕೆ ತಂದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳ ಮಕ್ಕಳು ತಮಗೆ ಪರೀಕ್ಷೆ ದಿನ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೋರಿದ್ದಾರೆ. ಸಂಬಂಧಪಟ್ಟಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

ಸುರಕ್ಷತೆಗೆ ಆದ್ಯತೆ:

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕೋವಿಡ್‌ ಪಾಸಿಟಿವಿಟಿ ದರ ಶೇ.13.2ರಷ್ಟಿತ್ತು. ಈ ವರ್ಷ ಕೇವಲ 1.7ರಷ್ಟಿದೆ. ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಪ್ರತಿ ದಿನ ಪರೀಕ್ಷೆಗೆ ಮುನ್ನ ಮತ್ತು ನಂತರ ಸ್ಯಾನಿಟೈಸಿಂಗ್‌ ಮಾಡಲಾಗುವುದು. ಪರೀಕ್ಷಾ ಕಾರ್ಯದಲ್ಲಿ ತೊಡಗುವ ಶೇ.98 ಅಧಿಕಾರಿ, ಸಿಬ್ಬಂದಿಗೆ ಈಗಾಗಲೇ ವ್ಯಾಕ್ಸಿನ್‌ ಹಾಕಲಾಗಿದೆ. ಉಳಿದವರಿಗೆ ಇನ್ನು ಕೆಲವೇ ದಿನಗಳಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ. 

ಸರ್ಕಾರ ಪರೀಕ್ಷೆ ನಡೆಸುತ್ತಿರುವುದಕ್ಕೆ ಎಲ್ಲ ವಿದ್ಯಾರ್ಥಿಗಳೂ ಹರ್ಷ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಇಲ್ಲದೆ ಪಾಸ್‌ ಆದವರೆಂಬ ಭಾವನೆ ಜೀವನ ಪೂರ್ತಿ ಉಳಿಯುವುದು ತಪ್ಪಿದಂತಾಗಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶಕುಮಾರ್‌ ತಿಳಿಸಿದ್ದಾರೆ.