ಇನ್ನು 6-12ನೇ ಕ್ಲಾಸ್‌ಗೆ ದಿನವಿಡೀ ಪಾಠ: ಸಚಿವ ನಾಗೇಶ್
* ಇಂದಿನಿಂದ ಪೂರ್ಣ ತರಗತಿ
* ಒಂದೂವರೆ ವರ್ಷದ ಬಳಿಕ ಶಾಲೆ, ಕಾಲೇಜಲ್ಲಿ ಹಿಂದಿನಂತೆ ಬೋಧನೆ
* ಪಾಸಿಟಿವಿಟಿ ಶೇ.1 ಇರುವ ಜಿಲ್ಲೆಯಲ್ಲಿ ಮಾತ್ರ
ಬೆಂಗಳೂರು(ಅ.01): ರಾಜ್ಯದ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ(students) ಇಂದಿನಿಂದ ಕೋವಿಡ್ ಪೂರ್ವ ಮಾದರಿಯಲ್ಲಿ ದಿನಪೂರ್ತಿ ಭೌತಿಕ ತರಗತಿಗಳು ಆರಂಭವಾಗಲಿವೆ.
ಕೋವಿಡ್(Covid19) ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅ.1ರಿಂದ ಪೂರ್ಣ ಪ್ರಮಾಣದಲ್ಲಿ ಶೇ.100ರಷ್ಟು ಹಾಜರಾತಿಗೆ ಅವಕಾಶ ನೀಡಿ ಶಾಲೆ, ಕಾಲೇಜುಗಳನ್ನು ನಡೆಸಲು ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ನೇತೃತ್ವದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳಿಂದ ಈಗಾಗಲೇ ಶಾಲೆ, ಕಾಲೇಜುಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ವಿವರವಾದ ವೇಳಾಪಟ್ಟಿಹಾಗೂ ಕೋವಿಡ್ ನಿಯಂತ್ರಣ ಮಾರ್ಗಸೂಚಿಯೊಂದಿಗೆ ಅಧಿಕೃತ ಸುತ್ತೋಲೆ ಕೂಡ ಹೊರಬೀಳುವ ಸಾಧ್ಯತೆ ಇದೆ.
ಇದರೊಂದಿಗೆ ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಆರಂಭಕ್ಕೂ ಮುನ್ನ ನಡೆಯುತ್ತಿದ್ದ ಮಾದರಿಯಲ್ಲಿ ಪೂರ್ಣಾವಧಿ ತರಗತಿ ಪಾಠಗಳು ನಡೆಯಲಿವೆ. ಈ ಮಧ್ಯೆ, ಶೇ.1ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಈಗ ನಡೆಯುತ್ತಿರುವಂತೆ ತರಗತಿಗಳನ್ನು ಮುಂದುವರೆಸಲು ಸರ್ಕಾರ ಸೂಚಿಸಿರುವುದರಿಂದ ಚಿಕ್ಕಮಗಳೂರು, ಉಡುಪಿ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ, ಕಾಲೇಜುಗಳು ಆರಂಭವಾಗುವುದು ಅನುಮಾನ. ಈ ಸಂಬಂಧ ಆಯಾ ಜಿಲ್ಲಾಡಳಿತಗಳು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ ನಾಗೇಶ್
ಕೋವಿಡ್ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಕಳೆದ ಆ.23ರಿಂದ 9ರಿಂದ 12ನೇ ತರಗತಿ, ಸೆ.6ರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ ಭೌತಿಕ ತರಗತಿಗಳನ್ನು(offline Classes) ಆರಂಭಿಸಿತ್ತಾದರೂ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಅವಕಾಶ ನೀಡಿರಲಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಿತ್ಯ ಅರ್ಧದಿನ ಮಾತ್ರ ನಾಲ್ಕರಿಂದ ಐದು ಪೀರಿಯಡ್ ತರಗತಿ ನಡೆಸಲು ಅವಕಾಶ ನೀಡಿತ್ತು. ಅಲ್ಲದೆ, ಪಿಯು ವಿದ್ಯಾರ್ಥಿಗಳಿಗೆ ಶೇ.50ರಷ್ಟುಮಕ್ಕಳಿಗೆ ವಾರದ ಮೊದಲ ಮೂರುದಿನ, ಉಳಿದ ಮೂರು ದಿನ ಇನ್ನುಳಿದ ಮಕ್ಕಳಿಗೆ ಭೌತಿಕ ತರಗತಿ ನಡೆಸಬೇಕು. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿ ಅನುಸರಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿಕೊಂಡು ತರಗತಿ ನಡೆಸಲು, ಪ್ರೌಢ ಶಾಲೆಗಳಲ್ಲಿ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ನಂತರ ತರಗತಿ ನಡೆಸಲು ಸುತ್ತೋಲೆ ಹೊರಡಿಸಿತ್ತು.
ಈಗ ಶುಕ್ರವಾರದಿಂದ 6ರಿಂದ 12ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೂ ಶೇ.100ರಷ್ಟು ಹಾಜರಾತಿಯೊಂದಿಗೆ ದಿನಪೂರ್ತಿ ತರಗತಿಗಳು ನಡೆಯಲಿವೆ. ಇನ್ನು, ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದಲ್ಲಿ ತರಗತಿಗಳನ್ನು ನಡೆಸಲು ಶಾಲೆ, ಪಿಯು ಕಾಲೇಜುಗಳು ಸಜ್ಜಾಗಿವೆ.
ಇಂದು ಸುತ್ತೋಲೆ
ಸರ್ಕಾರದ ಆದೇಶದಂತೆ ಅ.1ರಿಂದ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.100ರಷ್ಟುಹಾಜರಾತಿ ಅವಕಾಶದೊಂದಿಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲು ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ನಮ್ಮ ಇಲಾಖಾ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ. ವಿವರವಾದ ಸುತ್ತೋಲೆಯನ್ನು ಶುಕ್ರವಾರ ಹೊರಡಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದಾರೆ.