ವಿದ್ಯಾರ್ಥಿಗಳೇನು ಉಗ್ರರೇ?: ರಜೆ ಕೊಟ್ಟಿದ್ದಕ್ಕೆ ಡಿಕೆಶಿ ಆಕ್ರೋಶ
* ನಮ್ಮ ವಿದ್ಯಾರ್ಥಿಗಳು ಕಾನೂನಿಗೆ ತಲೆಬಾಗುವವರು
* ರಾಹುಲ್, ಸೋನಿಯಾ ತಪ್ಪು ಮಾಡಿಲ್ಲ
* ಸರ್ಕಾರದ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ
ಬೆಂಗಳೂರು(ಜೂ.21): ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ನಿನ್ನೆ(ಸೋಮವಾರ) ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿರುವುದು ದುರಾದೃಷ್ಟಕರ. ನಮ್ಮ ವಿದ್ಯಾರ್ಥಿಗಳನ್ನು ಸರ್ಕಾರ ಭಯೋತ್ಪಾದಕರು ಎಂದುಕೊಂಡಿದೆಯೇ? ಸರ್ಕಾರದ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಂತಿಪ್ರಿಯ ರಾಜ್ಯವಾಗಿದ್ದು ಕನ್ನಡಿಗರು ವಿದ್ಯಾವಂತರಾಗಿದ್ದಾರೆ. ಅವರು ಎಂದಿಗೂ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಪ್ರತಿಭಟನೆ ನಡೆಸುವುದಾದರೆ ಅದನ್ನು ಕ್ರಮಬದ್ಧ, ಕಾನೂನುಬದ್ಧ ರೀತಿಯಲ್ಲಿ ಮಾಡುತ್ತಾರೆ. ಆದರೆ ಸರ್ಕಾರ ಏಕೆ ಇಷ್ಟುಚಿಂತಿತವಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಮಾಜಿ ಅಗ್ನಿವೀರರಿಗೆ ಸೆಕ್ಯುರಿಟಿ ಗಾರ್ಡ್ ಕೆಲಸ: ಡಿಕೆಶಿ ಆಕ್ರೋಶ
ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ. ಅವರು ವಿದ್ಯಾವಂತ ಹಾಗೂ ಕಾನೂನಿಗೆ ತಲೆಬಾಗುವ ನಾಗರಿಕರು. ಬೆಂಗಳೂರಿನ ವಿದ್ಯಾರ್ಥಿಗಳು ದೇಶಕ್ಕೆ ಕೀರ್ತಿ ತರುವಂತಹ ಪ್ರತಿಭಾವಂತರು. ಅವರ ವ್ಯಾಸಂಗಕ್ಕೆ ರಜೆ ನೀಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ. ನಮ್ಮ ವಿದ್ಯಾರ್ಥಿಗಳನ್ನು ಅವರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.
ರಾಹುಲ್, ಸೋನಿಯಾ ತಪ್ಪು ಮಾಡಿಲ್ಲ- ಡಿಕೆಶಿ:
ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ತಪ್ಪು ಮಾಡಿಲ್ಲ. ಕೇಂದ್ರ ಸರ್ಕಾರ ಕಾನೂನನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರತಿಭಟಿಸಲು ನಮಗೆ ಹಕ್ಕಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಪ್ರಮಾಣಪತ್ರದಲ್ಲೂ ಈ ಸಂಸ್ಥೆಯ ಮಾಲೀಕತ್ವ ಘೋಷಿಸಿಕೊಂಡಿಲ್ಲ. ಸ್ವಾತಂತ್ರ್ಯ ಸಮಯದಲ್ಲಿ ಹಾಗೂ ನಂತರ ಕಾಂಗ್ರೆಸ್, ಜನರ ಧ್ವನಿಯಾಗಲು ನೆಹರೂ ಅವರು ಈ ಪತ್ರಿಕೆಯನ್ನು ಸ್ಥಾಪಿಸಿದ್ದರು. ನಾವು ಅದನ್ನು ಉಳಿಸಿಕೊಂಡು ಹೋಗುತ್ತೇವೆ ಎಂದರು.