Asianet Suvarna News Asianet Suvarna News

Rain| ಅಕಾಲಿಕ ಮಳೆಗೆ ಶಿಥಿಲಗೊಂಡ ಶಾಲಾ ಕೊಠಡಿ: ಆತಂಕದಲ್ಲೇ ವಿದ್ಯಾರ್ಥಿಗಳಿಗೆ ಪಾಠ..!

*  ಕೊರೋನಾ ಬಳಿಕ ಶಾಲೆ ಆರಂಭವಾದರೂ ಆತಂಕದಲ್ಲಿ ಮಕ್ಕಳು
*  ನಿರಂತರ ಮಳೆಗೆ 271 ಶಾಲೆಗಳ ಕೊಠಡಿಗಳಿಗೆ ಹಾನಿ
*  ಒಂದೇ ಕೊಠಡಿಯಲ್ಲಿ ಮೂರ್ನಾಲ್ಕು ತರಗತಿ
 

Dilapidated School Rooms Due to Untimely Rain in Haveri grg
Author
Bengaluru, First Published Nov 24, 2021, 12:45 PM IST

ನಾರಾಯಣ ಹೆಗಡೆ

ಹಾವೇರಿ(ನ.24): ಕೊರೋನಾದಿಂದ(Coronavirus) ಬಂದ್‌ ಆಗಿದ್ದ ಶಾಲೆಗಳು(Schools) ಕೆಲ ದಿನಗಳ ಹಿಂದಷ್ಟೇ ಪುನಾರಂಭಗೊಂಡಿದ್ದವು. ಮಕ್ಕಳು(Chidren) ಉತ್ಸಾಹದಿಂದಲೇ ಶಾಲೆಗೆ ಬರುತ್ತಿದ್ದ ಹೊತ್ತಿನಲ್ಲಿ ಕೆಲ ದಿನಗಳಿಂದ ಬಿದ್ದ ಅಕಾಲಿಕ ಮಳೆಗೆ(Untimely Rain) ಮತ್ತೆ ವಿದ್ಯಾರ್ಥಿಗಳು ಆತಂಕದಲ್ಲೇ ಕಲಿಯುವಂತಾಗಿದೆ. ಜಿಲ್ಲೆಯ 467 ಶಾಲಾ ಕೊಠಡಿಗಳು ಮಳೆಯಿಂದ ಶಿಥಿಲಗೊಂಡಿವೆ.

ಕೊರೋನಾ ಸೋಂಕು ವ್ಯಾಪಿಸಿದ ಕಾರಣಕ್ಕೆ 2020 ಮಾರ್ಚ್‌ನಲ್ಲಿ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು. ಸೋಂಕು ಇಳಿಮುಖವಾಗುತ್ತಿದ್ದಂತೆ ಹಂತಹಂತವಾಗಿ ಶಾಲೆಗಳು ಪುನಾರಂಭಗೊಳ್ಳುತ್ತಾ, ಕೆಲ ದಿನಗಳ ಹಿಂದಷ್ಟೇ 1ರಿಂದ 5ನೇ ತರಗತಿ ಸೇರಿದಂತೆ ಎಲ್ಲಾ ತರಗತಿಗಳು ಮರು ಆರಂಭಗೊಂಡಿದ್ದವು. ಕೊರೋನಾ ಬಳಿಕ ಖಾಸಗಿ ಶಾಲೆಗಳನ್ನು ಬಿಟ್ಟು ಅನೇಕ ಮಕ್ಕಳು ಸರ್ಕಾರಿ ಶಾಲೆಗಳನ್ನು ಸೇರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಅಧಿಕಗೊಂಡಿದೆ. ಆದರೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಿದ್ದ ಮಳೆಯಿಂದ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಹೆಕ್ಟೆರ್‌ ಪ್ರದೇಶದ ಬೆಳೆ ಹಾನಿಯಾಗಿದೆ(Crop Loss). ಸಾವಿರಾರು ಮನೆಗಳು ಬಿದ್ದಿವೆ. ಶಾಲಾ ಕಟ್ಟಡಗಳೂ ಶಿಥಿಲಗೊಂಡು ವಿದ್ಯಾರ್ಥಿಗಳ(Students) ಪಾಲಿಗೂ ಮಳೆ ಕಂಟಕ ತಂದಿಟ್ಟಿದೆ.

NEP Karnataka; 'ಈಶಾನ್ಯದಲ್ಲಿ ಮೊಳಗಿದ ಕನ್ನಡ' ಹೊಸ ಶಿಕ್ಷಣ ನೀತಿ ಮೊದಲ ಹೆಜ್ಜೆ ಕರ್ನಾಟಕದಿಂದ

476 ಶಾಲಾ ಕೊಠಡಿಗೆ ಹಾನಿ

ಕಳೆದ ವಾರ ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಮಕ್ಕಳ ಸುರಕ್ಷತೆಗಾಗಿ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಿ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿತ್ತು. ಆದರೆ, ಹಲವು ಶಾಲೆಗಳ ಗೋಡೆ ಕುಸಿತ, ಕಾಂಪೌಂಡ್‌ ಬಿದ್ದಿರುವುದು, ಛಾವಣಿ ಕುಸಿದಿರುವುದು ಸೇರಿದಂತೆ ಹಾನಿಯಾಗಿದೆ. ಶಿಥಿಲಗೊಂಡಿರುವ ಕೊಠಡಿಯಿಂದ ತರಗತಿ(Class) ಸ್ಥಳಾಂತರಿಸುವ ಕಾರ್ಯವನ್ನೂ ಮಾಡಲಾಗಿದೆ. ಎರಡು ದಿನಗಳಿಂದ ಮಳೆ ತಗ್ಗಿದ್ದರೂ ಹಾನಿ ಮುಂದುವರಿದಿದೆ.

ಜಿಲ್ಲೆಯ 271 ಶಾಲೆಗಳ 476 ತರಗತಿ ಕೋಣೆಗಳಿಗೆ ಮಳೆಯಿಂದ ಹಾನಿಯಾಗಿದೆ. ಹಾವೇರಿ(Haveri) ತಾಲೂಕಿನ 55 ಶಾಲೆಗಳ 96 ಕೊಠಡಿಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲೂಕಿನ 31 ಶಾಲೆಗಳ 55 ಕೊಠಡಿ, ಹಾನಗಲ್ಲ ತಾಲೂಕಿನ 21 ಶಾಲೆಗಳ 39 ಕೊಠಡಿ, ಹಿರೇಕೆರೂರು ತಾಲೂಕಿನ 43 ಶಾಲೆಗಳ 78 ಕೊಠಡಿ, ರಾಣಿಬೆನ್ನೂರು ತಾಲೂಕಿನ 38 ಶಾಲೆಗಳ 70 ತರಗತಿ ಕೋಣೆಗಳಿಗೆ ಹಾನಿಯಾಗಿದೆ. ಸವಣೂರು ತಾಲೂಕಿನ 32 ಶಾಲೆಗಳ 66 ಕೊಠಡಿ, ಶಿಗ್ಗಾಂವಿ ತಾಲೂಕಿನ 51 ಶಾಲೆಗಳ 72 ಕೊಠಡಿಗಳು ಶಿಥಿಲಗೊಂಡಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವರದಿ ಸಲ್ಲಿಸಿದೆ.

ಈ ಎಲ್ಲ ಕಟ್ಟಡಗಳನ್ನು ಮರು ನಿರ್ಮಾಣ ಮಾಡಬೇಕಿದೆ. ಅಲ್ಲಿಯವರೆಗೆ ಮಕ್ಕಳು ಪರ್ಯಾಯ ಸ್ಥಳದಲ್ಲಿ ಕಲಿಯಬೇಕಿದೆ. ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳಿಲ್ಲದೇ ಸಮಸ್ಯೆಯಾಗಿದೆ. ಈಗ ಮಳೆಯಿಂದ ಮತ್ತಷ್ಟು ತರಗತಿ ಕೋಣೆ ಶಿಥಿಲಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತಾಗಿದೆ. ಒಂದೇ ಕೋಣೆಯಲ್ಲಿ ಎರಡು, ಮೂರು ತರಗತಿಗಳ ಮಕ್ಕಳನ್ನು ಕೂರಿಸಿ ಪಾಠ ಮಾಡುವುದು ಶಿಕ್ಷಕರಿಗೂ(Teachers) ಸಮಸ್ಯೆಯಾಗಿ ಪರಿಣಮಿಸಿದೆ.

Rain Effect: ಭಾರೀ ಮಳೆ, ಈ ಜಿಲ್ಲೆಗಳಲ್ಲಿ 2 ದಿನ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ

ಶಿಥಿಲಗೊಂಡ 125 ಅಂಗನವಾಡಿ ಕಟ್ಟಡ

ಕೆಲ ದಿನಗಳಿಂದ ಅಂಗನವಾಡಿ ಕೇಂದ್ರಗಳನ್ನೂ ಆರಂಭಿಸಲಾಗಿತ್ತು. ಪುಠಾಣಿ ಮಕ್ಕಳು ಅಂಗನವಾಡಿಯತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ, ಮಳೆಯಿಂದ ಪಾಲಕರು ಮಕ್ಕಳನ್ನು ಕಳುಹಿಸಲು ಹೆದರುವಂತಾಗಿದೆ. ಜಿಲ್ಲೆಯ 125 ಅಂಗನವಾಡಿ ಕಟ್ಟಡಗಳು ಮಳೆಯಿಂದ ಶಿಥಿಲಗೊಂಡಿವೆ. ಪರ್ಯಾಯ ಕಟ್ಟಡದಲ್ಲಿ ಕೇಂದ್ರ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ 2019ರ ಪ್ರವಾಹದ ಸಂದರ್ಭದಲ್ಲೂ ಸಾವಿರಾರು ಶಾಲಾ, ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದವು. ಬಳಿಕ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಪುನರ್‌ ನಿರ್ಮಾಣ ಕಾರ್ಯ ನಡೆದಿತ್ತು. ಈಗ ಮತ್ತೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಾಲಾ ಕಟ್ಟಡಗಳಿಗೆ ಹಾನಿಯಾಗಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಆದಷ್ಟು ಬೇಗ ಅನುದಾನ ಒದಗಿಸಿ ಮಕ್ಕಳ ಸುರಕ್ಷತೆಗೆ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕಿದೆ.

ನಿರಂತರವಾಗಿ ಬಿದ್ದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 476 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಮಕ್ಕಳ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತರಗತಿ ನಡೆಸಲು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಾವೇರಿ ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ. 
 

Follow Us:
Download App:
  • android
  • ios