ಬೆಂಗಳೂರು(ಮೇ.30): ಸರ್ಕಾರಿ ಶಾಲೆಗಳು ಸೇರಿದಂತೆ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಿಗೆ ಜೂನ್‌ 15ರೊಳಗೆ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರತಿ ವರ್ಷ ಏಪ್ರಿಲ್‌ ಮಾಸಾಂತ್ಯ ಅಥವಾ ಮೇ ಆರಂಭದ ವೇಳೆಗೆ ಮಕ್ಕಳ ದಾಖಲಾತಿ, ಶಾಲಾರಂಭ, ಪರೀಕ್ಷೆ ಸೇರಿದಂತೆ ಇಡೀ ವರ್ಷದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಈವರೆಗೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೋವಿಡ್‌ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಹಾಗೂ ಸೆಮಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಶೈಕ್ಷಣಿಕ ವೇಳಾಪಟ್ಟಿಪ್ರಕಟಿಸುವುದು ತಡವಾಗಿದೆ. ಜೂನ್‌ 15ರೊಳಗೆ ವೇಳಾಪಟ್ಟಿಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಶೈಕ್ಷಣಿಕ ಮಾರ್ಗಸೂಚಿಗೆ ಸಮಿತಿ ರಚನೆ: ಈ ಮಧ್ಯೆ, ಕಳೆದ ವರ್ಷ ಕೋವಿಡ್‌ನಿಂದ ಮಕ್ಕಳು ಶಾಲೆಗೆ ಬರಲಾಗದ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬಳಸಿ ಮಕ್ಕಳು ಮನೆಯಲ್ಲಿದ್ದರೂ ಯಾವ ರೀತಿ ಶಿಕ್ಷಣ ಒದಗಿಸಬೇಕೆಂದು ಇಲಾಖೆ ಸ್ಪಷ್ಟಮಾರ್ಗಸೂಚಿ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ತಜ್ಞರ ಸಮಿತಿ ರಚಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಈ ಸಮಿತಿ ರಚನೆಯಾದ ಬಳಿಕ ಎರಡು ವಾರಗಳಲ್ಲಿ ವರದಿ ನೀಡಲು ಸೂಚಿಸುವ ಸಾಧ್ಯತೆ ಇದೆ.

ಶಾಲೆ ಯಾವಾಗ? ವೇಳಾಪಟ್ಟಿ ನೀಡಿ: ರುಪ್ಸಾ ಒತ್ತಾಯ

ತಜ್ಞರ ವರದಿ ಆಧರಿಸಿ, ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಕರ್ನಾಟಕ ಶಿಕ್ಷಣ ನೀತಿ ಅನುಸಾರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮಾರ್ಗಸೂಚಿ ರಚಿಸಲಿದೆ. ಇದು ಪ್ರಸ್ತುತ ಕೋವಿಡ್‌ ಸಂದರ್ಭಕ್ಕೆ ಮಾತ್ರ ಸೀಮಿತವಾಗದೆ ಮುಂದೆ ಇಂತಹ ಸನ್ನಿವೇಶಗಳು ಎದುರಾಗಿ ಮಕ್ಕಳು ಶಾಲೆಗೆ ಬರಲಾಗದಿದ್ದರೂ ಹೇಗೆ ಶಿಕ್ಷಣ ಒದಗಿಸಬೇಕು. ಪಠ್ಯಕ್ರಮ ಕಡಿತಗೊಳಿಸಬೇಕೆ, ಪರೀಕ್ಷೆ ನಡೆಸುವುದು ಹೇಗೆ, ತರಗತಿ ಬೋಧನೆಗೆ ಪರ್ಯಾಯ ಮಾರ್ಗಗಳಾವುವು, ಎಷ್ಟುದಿನ ಅವುಗಳನ್ನು ನಡೆಸುವುದು ಎಂಬಿತ್ಯಾದಿ ಎಲ್ಲಾ ಅಂಶಗಳನ್ನೂ ಮಾರ್ಗಸೂಚಿ ಒಳಗೊಂಡಿರುತ್ತದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಹತ್ತು ಹದಿನೈದು ದಿನಗಳಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿಪ್ರಕಟಿಸಲಾಗುವುದು. ಕೋವಿಡ್‌ನಿಂದ ಕಳೆದ ವರ್ಷ ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾದ ಪರಿಣಾಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳಿಗೆ ಪರ್ಯಾಯ ಬೋಧನಾ ವ್ಯವಸ್ಥೆ ಕುರಿತು ಸ್ಪಷ್ಟ ಮಾರ್ಗಸೂಚಿಯನ್ನೂ ಸಿದ್ಧಪಡಿಸಲು ಇಲಾಖೆ ಕ್ರಮ ವಹಿಸುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ. 

ಖಾಸಗಿ ಶಾಲೆಗಳ ಅಸಮಾಧಾನ

ಸರ್ಕಾರ ಕೋವಿಡ್‌ನಿಂದ ಈಗಾಗಲೇ ಪಾಠ ಕಲಿತಿದ್ದರೂ ಎಚ್ಚೆತ್ತುಕೊಂಡಿಲ್ಲ. ಕೋವಿಡ್‌ ಸಂದರ್ಭದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ನೀಡುವುದು ಹೇಗೆ ಎಂಬ ಬಗ್ಗೆ ಇಷ್ಟೊತ್ತಿಗೆ ಸ್ಪಷ್ಟಮಾರ್ಗಸೂಚಿ ಸಿದ್ಧಪಡಿಸಿ ಶೈಕ್ಷಣಿಕ ವೇಳಾಪಟ್ಟಿಪ್ರಕಟಿಸಬೇಕಿತ್ತು. ಆದರೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇನ್ನೂ ವೇಳಾಪಟ್ಟಿಬಿಡುಗಡೆ ಮಾಡಿಲ್ಲ. ಮಾರ್ಗಸೂಚಿ ರಚನೆಗೆ ತಜ್ಞರ ಸಮಿತಿಯನ್ನೂ ರಚಿಸಿಲ್ಲ. ಇದು ಆರ್‌ಟಿಇ ನಿಯಮ ಉಲ್ಲಂಘನೆ. ಮಕ್ಕಳಿಗೆ ಈ ವರ್ಷವೂ ಸರಿಯಾಗಿ ಶಿಕ್ಷಣ ದೊರೆಯದಿದ್ದರೆ ಅದಕ್ಕೆ ಸರ್ಕಾರವೇ ಜವಾಬ್ದಾರಿ ಎಂದು ರುಪ್ಸಾ, ಕ್ಯಾಮ್ಸ್‌ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಾದ ಲೋಕೇಶ್‌ ತಾಳಿಕಟ್ಟೆಹಾಗೂ ಡಿ.ಶಶಿಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹತ್ತು ಹದಿನೈದು ದಿನಗಳಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲಾಗುವುದು. ಕೋವಿಡ್‌ನಿಂದ ಕಳೆದ ವರ್ಷ ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾದ ಪರಿಣಾಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳಿಗೆ ಪರ್ಯಾಯ ಬೋಧನಾ ವ್ಯವಸ್ಥೆ ಕುರಿತು ಸ್ಪಷ್ಟಮಾರ್ಗಸೂಚಿಯನ್ನೂ ಸಿದ್ಧಪಡಿಸಲು ಇಲಾಖೆ ಕ್ರಮ ವಹಿಸುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌ ಹೇಳಿದ್ದಾರೆ.