ಪಠ್ಯ ಪರಿಷ್ಕರಣೆ ಸ್ವಾರ್ಥಕ್ಕೆ ವಿರೋಧ: ಸಿ.ಟಿ.ರವಿ ಕಿಡಿ
* ‘ಪಠ್ಯಪುಸ್ತಕ ಪರಿಷ್ಕರಣೆ: ಸತ್ಯ-ಮಿಥ್ಯ’ ಎಂಬ ವಿಚಾರ ಸಂಕಿರಣ
* ಮತಗಳಿಕೆಗೆ ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುತ್ತಿದೆ
* ಚಿಂತನೆಯ ಕಳೆ ಬೆಳೆಯಲು ಕಮ್ಯುನಿಸ್ಟರು ಒಡಕಿನ ಸಿದ್ಧಾಂತ ತುರುಕುತ್ತಿದ್ದಾರೆ
ಬೆಂಗಳೂರು(ಜೂ.19): ಕಾಂಗ್ರೆಸ್, ಕಮ್ಯುನಿಸ್ಟ್, ಕನ್ವರ್ಷನ್ ಮಾಫಿಯಾ ಎಂಬ ಮೂರು ‘ಸಿ’ ಗಳು ದೇಶವನ್ನು ಹಾಳುಮಾಡುತ್ತಿವೆ. ಸ್ವಾರ್ಥಕ್ಕಾಗಿ ಇವರು ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಸಂಜೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯಿಂದ ಏರ್ಪಡಿಸಿದ್ದ ‘ಪಠ್ಯಪುಸ್ತಕ ಪರಿಷ್ಕರಣೆ: ಸತ್ಯ-ಮಿಥ್ಯ’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮತಗಳಿಕೆಗೆ ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುತ್ತಿದೆ. ಚಿಂತನೆಯ ಕಳೆ ಬೆಳೆಯಲು ಕಮ್ಯುನಿಸ್ಟರು ಒಡಕಿನ ಸಿದ್ಧಾಂತ ತುರುಕುತ್ತಿದ್ದಾರೆ. ನಮ್ಮತನ ಜಾಗೃತವಾದಾಗ ಯಾರೂ ಮತಾಂತರ ಹೊಂದುವುದಿಲ್ಲ. ಆದ್ದರಿಂದಲೇ ಮತಾಂತರ ಮಾಫಿಯಾ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮೂರು ‘ಸಿ’ಗಳು ಸ್ವಾರ್ಥಕ್ಕಾಗಿ ದೇಶವನ್ನು ಹಾಳು ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಪರಿಷ್ಕೃತ ಪಠ್ಯ ವಾಪಸ್ ಪ್ರಶ್ನೆಯೇ ಇಲ್ಲ: ಸಚಿವ ನಾಗೇಶ್
ಯಾವ ದೇಶವೂ ತನ್ನ ನೆಲದ ಮೇಲೆ ನಡೆದ ಆಕ್ರಮಣವನ್ನು ವೈಭವೀಕರಣ ಮಾಡಿಲ್ಲ. ಆದರೆ ದುರಂತವೆಂದರೆ ನಮ್ಮಲ್ಲಿ ಆಕ್ರಮಣಕಾರರನ್ನು ವೈಭವೀಕರಣಗೊಳಿಸಲಾಗಿದೆ. ಅಕ್ಬರ್ ದಿ ಗ್ರೇಟ್, ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತಾ ಬಂದಿದ್ದೇವೆ. ನಮ್ಮ ರಾಜರ ಇತಿಹಾಸವೇ ಭವ್ಯವಾದುದು ಎಂದು ಮಕ್ಕಳಿಗೆ ಏಕೆ ಕಲಿಸಿಲ್ಲ ಎಂದು ರವಿ ಕೇಳಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಗುರುಪ್ರಕಾಶ್ ಪಾಸ್ವಾನ್, ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಲ್ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ‘ಪಠ್ಯಪುಸ್ತಕ ಪರಿಷ್ಕರಣೆ: ಸತ್ಯ-ಮಿಥ್ಯ’ ವಿಚಾರ ಸಂಕಿರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಗುರುಪ್ರಕಾಶ್ ಪಾಸ್ವಾನ್ ಮತ್ತಿತರರು ಭಾಗವಹಿಸಿದ್ದರು.