ನರ್ಸಿಂಗ್ ಕಾಲೇಜು ಪ್ರವೇಶಕ್ಕೆ ನಕಲಿ ವಿದ್ಯಾರ್ಥಿಗಳ ಸೃಷ್ಟಿಸಿ ಅಕ್ರಮ..!
ಅಕ್ರಮ ಸಾಬೀತಾಗಿ ಎಂಟು ತಿಂಗಳು ಕಳೆದಿದ್ದು, ಈ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಗೆ ಎಲ್ಲ ದಾಖಲೆಗಳೂ ಲಭ್ಯವಾಗಿವೆ. ಖಾಸಗಿ ಕಾಲೇಜುಗಳೊಂದಿಗೆ ಶಾಮೀಲಾಗಿ ಅಕ್ರಮ ನಡೆಸಿರುವ ಮಂಡಳಿ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ ಆರು ತಿಂಗಳು ಕಳೆದಿದ್ದರೂ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಇದು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಪ್ರವೇಶಾತಿ, ಪರೀಕ್ಷಾ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಅನುಮಾನ ಹುಟ್ಟಲು ಕಾರಣವಾಗಿದೆ.
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಜೂ.28): ಪೊಲೀಸ್ ಇನ್‌ಸ್ಪೆಕ್ಟರ್ ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆಗಳ ಮಾರಾಟದಂತಹ ಹಗರಣ ನಡೆದ ರಾಜ್ಯದಲ್ಲಿ ಈಗ ನರ್ಸಿಂಗ್ ಕಾಲೇಜುಗಳ ಪ್ರವೇಶಾತಿಗೆ ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ 41 ನರ್ಸಿಂಗ್ ಕಾಲೇಜುಗಳು ಅಧಿಕಾರಿಗಳ ನೆರವಿನೊಂದಿಗೆ ಅಕ್ರಮ ನಡೆಸಿವೆ.
ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ಬರುವ ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿಯಲ್ಲಿ ವಿವಿಧ ಖಾಸಗಿ ನರ್ಸಿಂಗ್ ಕಾಲೇಜುಗಳ 235 ನಕಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿ ಸಂಖ್ಯೆ ವಿತರಿಸಲಾಗಿದೆ. ಆದರೆ ಆ ಎಲ್ಲ ವಿದ್ಯಾರ್ಥಿಗಳ ವಿವರಗಳನ್ನೂ ತಿದ್ದುಪಡಿ ನೆಪದಲ್ಲಿ ಬದಲು ಮಾಡಿ ಅವರ ಸೀಟುಗಳನ್ನು 235 ಹೊಸ ವಿದ್ಯಾರ್ಥಿಗಳಿಗೆ ನೀಡಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಶಾಲೆಗಳ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು!
ಈ ಅಕ್ರಮ ಸಾಬೀತಾಗಿ ಎಂಟು ತಿಂಗಳು ಕಳೆದಿದ್ದು, ಈ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಗೆ ಎಲ್ಲ ದಾಖಲೆಗಳೂ ಲಭ್ಯವಾಗಿವೆ. ಖಾಸಗಿ ಕಾಲೇಜುಗಳೊಂದಿಗೆ ಶಾಮೀಲಾಗಿ ಅಕ್ರಮ ನಡೆಸಿರುವ ಮಂಡಳಿ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ ಆರು ತಿಂಗಳು ಕಳೆದಿದ್ದರೂ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಇದು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಪ್ರವೇಶಾತಿ, ಪರೀಕ್ಷಾ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಅನುಮಾನ ಹುಟ್ಟಲು ಕಾರಣವಾಗಿದೆ.
ಏನಿದು ಅಕ್ರಮ?:
2022-23ನೇ ಸಾಲಿನ ನರ್ಸಿಂಗ್ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕೆ ನರ್ಸಿಂಗ್ ಪರೀಕ್ಷಾ ಮಂಡಳಿ ಜತೆ ಸಂಯೋಜನೆ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಕಾಲೇಜುಗಳಿಗೆ 2022ರ ಡಿ.31ರವರೆಗೆ ದಾಖಲಾಗಿರುವ ವಿದ್ಯಾರ್ಥಿಗಳ ವಿವರ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ವೆಬ್‌ಸೈಟ್‌ನಲ್ಲಿ ‘ಆಯ್ಕೆ’ (ಅಡ್ಮಿಷನ್) ವಿಭಾಗ ತೆಗೆಯುವುದಾಗಿ ಹಾಗೂ ನಂತರ ದಾಖಲು ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಪಡೆಯಲು ಅವಕಾಶವಿಲ್ಲ ಎಂದು ಹೇಳಲಾಗಿತ್ತು.
ಇದರಿಂದ ಅಕ್ರಮದ ಹಾದಿ ಹಿಡಿದ ನರ್ಸಿಂಗ್ ಕಾಲೇಜುಗಳು, ನಕಲಿ ಹೆಸರುಗಳಲ್ಲಿ ಕಾಲೇಜಿಗೆ ದಾಖಲಾಗಿರುವಂತೆ ವಿವರಗಳನ್ನು ಸೃಷ್ಟಿಸಿ ಮಂಡಳಿಗೆ ಸಲ್ಲಿಸಿದ್ದವು. ಉದಾಹರಣೆಗೆ ಮೋಹನ್ s/o ಬಸಪ್ಪ ಎಂಬ ವಿದ್ಯಾರ್ಥಿ ದಾಖಲಾಗದಿದ್ದರೂ ಕಾಲೇಜಿನಲ್ಲಿ ಪ್ರವೇಶ ಪಡೆದಿರುವುದಾಗಿ ನಕಲಿ ವಿವರಗಳನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಿದ್ದವು. ಬಳಿಕ ಯಾವುದಾದರೂ ನೈಜ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ರವೇಶ ಪಡೆದರೆ ‘ಕ್ಲರಿಕಲ್’ ದೋಷದ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿಯ ವಿವರಗಳನ್ನು ತಿದ್ದುಪಡಿ ಮಾಡಿ ಹೊಸ ವಿವರಗಳನ್ನು ನಮೂದು ಮಾಡುವಂತೆ ವಿದ್ಯಾರ್ಥಿ ಹೆಸರು, ತಂದೆ ಹೆಸರು, ವಿಳಾಸ ಎಲ್ಲವನ್ನೂ ಬದಲಿಸಲು ಶಿಫಾರಸು ಮಾಡುತ್ತಿತ್ತು. ಇದಕ್ಕೆ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಕುಮ್ಮಕ್ಕು ನೀಡಿದ್ದರು.
ಈ ರೀತಿ 236 ವಿದ್ಯಾರ್ಥಿಗಳ ಹೆಸರನ್ನು ತಿದ್ದಲಾಗಿದೆ. ಅಂತಿಮ ದಿನಾಂಕ ಕಳೆದ 9 ತಿಂಗಳವರೆಗೆ ಹೊಸ ವಿದ್ಯಾರ್ಥಿಗಳಿಗೆ (ತಮಗೆ ಬೇಕಾದವರಿಗೆ) ಪ್ರವೇಶ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ 236 ವಿದ್ಯಾರ್ಥಿಗಳ ವಿವರಗಳನ್ನು ಅಕ್ರಮ ನಡೆಸಲೆಂದೇ ತಿದ್ದಲಾಗಿದೆ ಎಂಬುದು ಸಾಬೀತಾಗಿತ್ತು.
2022ರ ಡಿ.31ಕ್ಕೆ ವಿದ್ಯಾರ್ಥಿಗಳ ವಿವರ ನೀಡಲು ಕೊನೆಯ ದಿನಾಂಕ ಆಗಿದ್ದರೂ 2023ರ ಅಕ್ಟೋಬರ್‌ವರೆಗೂ ವಿದ್ಯಾರ್ಥಿಗಳ ವಿವರಗಳನ್ನು ತಿದ್ದಲಾಗಿತ್ತು. ಈ ಹಿನ್ನೆಲೆಯಲ್ಲಿ 2023ರ ಅ.17 ರಂದು ಮಂಡಳಿಯ ವಿಶೇಷ ಅಧಿಕಾರಿಯು ಕಾರ್ಯದರ್ಶಿಗಳಿಗೆ ಪತ್ರ ಬರೆದು, ಕಾಲೇಜುಗಳು ಖುದ್ದು ಹಾಜರಾಗಿ ಸಮಜಾಯಿಷಿ ಪಡೆಯಿರಿ ಎಂದು ಸೂಚಿಸಿದ್ದರು.
ಅಕ್ರಮ ಬಯಲಾಗಿದ್ದು ಹೇಗೆ?:
ಮಂಡಳಿ ಕಾರ್ಯದರ್ಶಿಗಳು 2023ರ ಅ.26 ರಂದು 41 ಕಾಲೇಜುಗಳಿಗೆ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದ್ದರು. ಈ ಪೈಕಿ 23 ಕಾಲೇಜುಗಳು ಉತ್ತರ ನೀಡಿದ್ದು, ತಾಂತ್ರಿಕ ದೋಷ, ಕ್ಲರಿಕಲ್ ತಪ್ಪುಗಳು, ಶಾಲಾ ಸಿಬ್ಬಂದಿಯ ಕಣ್ತಪ್ಪಿನಿಂದ ನಡೆಸಿರುವುದಾಗಿ ಹೇಳಿದ್ದವು. ಕೆಲವು ಕಾಲೇಜುಗಳು ಮಂಡಳಿಯ ಕಾರ್ಯದರ್ಶಿಗಳ ಅನುಮತಿ ಪಡೆದು ಕೊನೆಯ ದಿನಾಂಕವಾದ ನಂತರ ವಿದ್ಯಾರ್ಥಿಗಳ ಹೆಸರುಗಳನ್ನು ತಿದ್ದುಪಡಿ ಮಾಡಿ ಪರೀಕ್ಷಾ ನೋಂದಣಿ ಸಂಖ್ಯೆ ಪಡೆದಿರುವುದಾಗಿ ಬಾಯಿಬಿಟ್ಟಿದ್ದರು.
ತನ್ಮೂಲಕ ಬೆಂಗಳೂರು, ಹೊಸಕೋಟೆ, ಚಿಂತಾಮಣಿ, ಬಳ್ಳಾರಿ, ಕಲಬುರಗಿ, ಬೀದರ್, ಕೆಜಿಎಫ್, ಬಸವ ಕಲ್ಯಾಣ, ವಿಜಯನಗರ, ರಾಮನಗರದ 41 ನರ್ಸಿಂಗ್ ಕಾಲೇಜುಗಳು ಹಾಗೂ ಮಂಡಳಿ ಕಾರ್ಯದರ್ಶಿಯು ಪ್ರವೇಶ ಹಾಗೂ ಪರೀಕ್ಷಾ ನೋಂದಣಿ ಸಂಖ್ಯೆ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತ್ತು.
ತನಿಖೆಗೆ ಆದೇಶಿಸಿದ್ದರೂ ಕ್ರಮವಿಲ್ಲ:
ಈ ಬಗ್ಗೆ ವರದಿ ಪಡೆದಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರು 2023ರ ನವೆಂಬರ್ 26 ರಂದು ಆರೋಪಗಳ ಪಟ್ಟಿ ಸಿದ್ಧಪಡಿಸಿ ಇಲಾಖಾ ವಿಚಾರಣೆಗೆ ಆದೇಶ ಮಾಡುವಂತೆ ಸೂಚಿಸಿದ್ದರು.
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಕುಸಿತ: ಶಿಕ್ಷಕರ ಬಡ್ತಿ ತಡೆ ಹಿಂಪಡೆದು ಆದೇಶ
ಇದರಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಬಿ.ಎಲ್. ಸುಜಾತಾ ರಾಥೋಡ್ ಅವರು ಮಂಡಳಿ ಕಾರ್ಯದರ್ಶಿಗೆ ಶೋಕಾಸ್ ನೋಟೊಸ್ ಜಾರಿ ಮಾಡುವಂತೆ ವಿಶೇಷ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಾಗಿ ಆರು ತಿಂಗಳು ಕಳೆದಿದ್ದರೂ ಯಾರ ವಿರುದ್ಧವೂ ಸಣ್ಣ ಕ್ರಮವೂ ಆಗದಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.ನರ್ಸಿಂಗ್ ಪರೀಕ್ಷಾ ಮಂಡಳಿಯಲ್ಲಿ ನಕಲಿ ಪರೀಕ್ಷಾ ನೋಂದಣಿ ಸಂಖ್ಯೆ ಸೃಷ್ಟಿ ಅಕ್ರಮ ನಡೆದಿದ್ದು ನಿಜ. ಕೆಎಸ್‌ಡಿಎನ್‌ಇಬಿ
ಕಾರ್ಯದರ್ಶಿ ಜಿ.ಸಿ. ಮಮತಾ ಅವರಿಂದ ನಿಯಮಗಳ ಉಲ್ಲಂಘನೆ ಆಗಿದೆ. ವಿಶೇಷ ಅಧಿಕಾರಿ ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಅನುಮತಿ ಪಡೆಯದೆ ವೈಯಕ್ತಿಕ ನಿರ್ಣಯಗಳನ್ನು ಪಡೆದು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಇಲಾಖಾ ತನಿಖೆಗೆ ವಿಶೇಷ ಅಧಿಕಾರಿಗೆ ಶಿಫಾರಸು ಮಾಡಿದ್ದೇನೆ. ಅವರು ಇಲಾಖಾ ತನಿಖೆಗೆ ಆದೇಶ ಮಾಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ಡಾ.ಬಿ.ಎಲ್. ಸುಜಾತಾ ರಾಠೋಡ್ ತಿಳಿಸಿದ್ದಾರೆ.