ಕೊರೋನಾ : ಕೂಡಲೇ ನಡೆಯಲಿದ್ಯಾ ಈ ತರಗತಿಗಳ ಪರೀಕ್ಷೆ
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆತಂಕ ಹೆಚ್ಚಳವಾಗಿದ್ದು ಈ ನಿಟ್ಟಿನಲ್ಲಿ ಈ ತರಗತಿಗಳ ಪರೀಕ್ಷೆ ಕೂಡಲೇ ನಡೆಸಲು ಮನವಿ ಮಾಡಲಾಗಿದೆ.
ಬೆಂಗಳೂರು (ಮಾ.29): ಕೊರೋನಾ ಎರಡನೇ ಅಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ 6ರಿಂದ 9ನೇ ತರಗತಿ ಮಕ್ಕಳಿಗೆ, ಶಾಲೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೂಡಲೇ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್) ಮನವಿ ಮಾಡಿದೆ.
ಈ ಸಂಬಂಧ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಳೆದ ಜೂನ್ ತಿಂಗಳಿನಿಂದಲೇ ಖಾಸಗಿ ಶಾಲೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪಠ್ಯ ಬೋಧನೆ ಮಾಡಲಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಬೋಧನೆ ಮುಗಿಸಲಾಗಿದೆ. ಶಾಲೆಗಳಲ್ಲಿ ಪುನರಾವರ್ತನೆ ಕೂಡ ಮುಗಿಸಲಾಗಿದೆ. ವರ್ಷವಿಡೀ ಕಲಿತಿದ್ದು ವ್ಯರ್ಥವಾಗದ ರೀತಿಯಲ್ಲಿ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದಷ್ಟುಬೇಗ ವಾರ್ಷಿಕ ಪರೀಕ್ಷೆ ನಡೆಸಿದರೆ, ಮಕ್ಕಳ ಕಲಿಕೆಗೆ ಅರ್ಥ ಬರಲಿದೆ. ಇಲ್ಲವಾದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಪರೀಕ್ಷೆ ಇಲ್ಲ ಎಂಬ ಅಪಸ್ವರ ಎದುರಾಗಲಿದೆ. ಇದಕ್ಕೆ ಶಿಕ್ಷಣ ಸಚಿವರು ಆಸ್ಪದ ನೀಡಬಾರದು. ಪರೀಕ್ಷೆ ಮುಂದೂಡುವುದು ಅಥವಾ ರಜೆ ನೀಡುವ ಕೆಲಸ ಮಾಡದೆ, ಕೂಡಲೇ ಪರೀಕ್ಷೆ ನಡೆಸಿದರೆ ಒಳ್ಳೆಯದು ಎಂದು ಒತ್ತಾಯಿಸಿದ್ದಾರೆ.
1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್ ...
ಆಯಾ ಶಾಲೆಗಳ ಅನುಕೂಲಕ್ಕೆ ಪೂರಕವಾಗಿ ಮತ್ತು ಪಾಲಕ- ಪೋಷಕರ ಅಭಿಪ್ರಾಯದಂತೆ ತಕ್ಷಣ ಪರೀಕ್ಷೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಬೇಕು. ಕೊರೋನಾ ಹೆಚ್ಚಳವಾಗಿ ಶಾಲೆಗಳು ಮುಚ್ಚುವುದಕ್ಕಿಂತ ಮೊದಲು ಪರೀಕ್ಷೆಗಳನ್ನು ನಡೆಸಿದರೆ, ಶಾಲಾ ಸಿಬ್ಬಂದಿಗೂ ಬೇಸಿಗೆ ರಜೆ ಸಿಗಲಿದೆ. ಇದರ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಹ ಸಮಯಾವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.
ಇಲಾಖೆಯ ನಿಯಮಾನುಸಾರವೇ ನಿಗದಿತ ವೇಳಾಪಟ್ಟಿಪ್ರಕಾರವೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅದೇ ರೀತಿ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.