Asianet Suvarna News Asianet Suvarna News

ಮೊನ್ನೆ ಪಾಸಿಟಿವ್‌, ನಿನ್ನೆ ನೆಗೆಟಿವ್‌: ವಿದ್ಯಾರ್ಥಿ-ಶಿಕ್ಷಕರಿಗಿಲ್ಲ ಕೊರೋನಾ ಸೋಂಕು..!

ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಿಬ್ಬಂದಿ ಸೇರಿ 172 ಜನರಿಗೆ ಕೋವಿಡ್‌ ನೆಗೆಟಿವ್‌| ಗಂಟಲು ಬೇನೆ ಹಾಗೂ ಇತರೆ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಪರೀಕ್ಷೆ ಮಾಡಿಸಬೇಕು: ವೈದ್ಯರು| 

Corona Negative Report to Students and Teachers in Kalaburagi grg
Author
Bengaluru, First Published Mar 7, 2021, 2:48 PM IST

ಕಲಬುರಗಿ(ಮಾ.07): ಕಾಳಗಿಯ ಬೆಡಸೂರ ತಾಂಡಾದಲ್ಲಿ ಜರುಗಿದ ಮದುವೆಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್‌ ಸೋಂಕು ತಗುಲಿದ ಪರಿಣಾಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳಿಗೆ ಕೋವಿಡ್‌ ಟೆಸ್ಟ್‌ ನಡೆಸಲಾಗಿದ್ದು, ಶನಿವಾರ ಎಲ್ಲರಿಗೂ ನೆಗೆಟಿವ್‌ ವರದಿ ಬಂದಿದೆ ಎಂದು ಕಲಬುರಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್‌ ಸಾಸಿ ತಿಳಿಸಿದ್ದಾರೆ.

ಕಳೆದ ಫೆಬ್ರವರಿ 26 ರಂದು ಬೆಡಸೂರ ತಾಂಡಾದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಮಹಾರಾಷ್ಟ್ರದಿಂದ ಜನರು ಆಗಮಿಸಿದ್ದರು. ಮದುವೆಯಲ್ಲಿ ಭಾಗವಹಿಸಿದ ಸ್ಥಳೀಯ ಓರ್ವ ವ್ಯಕ್ತಿಗೆ ಕೋವಿಡ್‌ ಲಕ್ಷಣಗಳು ಕಂಡುಬಂದ ಕಾರಣ ಫೆ.27ರಂದು ತಪಾಸಣೆಗೊಳಪಡಿಸಿದಾಗ ಮಾ.1ರಂದು ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು. ವ್ಯಕ್ತಿಯ ಸಂಪರ್ಕದಲ್ಲಿ ಕಾಳಗಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯೊಬ್ಬ ಬಂದ ಎಂಬ ಕಾರಣಕ್ಕೆ ತಕ್ಷಣ ಶಾಲೆಯ 20 ವಿದ್ಯಾರ್ಥಿಗಳಿಗೆ ಮಾ.1ರಂದು ತಪಾಸಣೆಗೆ ಒಳಪಡಿಸಿದಾಗ 15 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಮಾ.4 ರಂದು ದೃಢವಾಯಿತು.

ತದನಂತರ ಮಾ.5ರಂದು ಮತ್ತೊಮ್ಮೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಿಬ್ಬಂದಿ ಸೇರಿ 172 ಜನರ ಗಂಟಲಿನ ಸ್ಯಾಂಪಲ್‌ ಪಡೆದು ಪರೀಕ್ಷಿಸಿದಾಗ ಶನಿವಾರ ಎಲ್ಲರಿಗೂ ಕೋವಿಡ್‌ ನೆಗೆಟಿವ್‌ ವರದಿ ಬಂದಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಕೇಸ್‌ ಹೆಚ್ಚಳ: ಪರಿಸ್ಥಿತಿ ಹೀಗೆ ಮುಂದುವರೆದ್ರೆ ಕಾದಿದೆ ಗಂಡಾಂತರ..!

ಕಾಳಗಿ ಸಂತೆ ಬಂದ್‌ ಮಾಡಲು ಸೂಚನೆ:

ಪಟ್ಟಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾ.8ರಂದು ನಡೆಯುವ ಕಾಳಗಿ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಕಾಳಗಿ ಸರ್ಕಾರಿ ಪ್ರೌಢ ಶಾಲೆಯನ್ನು ಮುಚ್ಚಲಾಗಿದ್ದು, ಶಾಲೆಯನ್ನು ಸ್ಯಾನಿಟೈಜ್‌ದಿಂದ ಸ್ವಚ್ಛಗೊಳಿಸಿ ಮಾ.8ರಿಂದ ಪುನ: ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕನಿಷ್ಠ 2 ಮೀಟರ್‌ ಶಾರೀರಿಕ ಅಂತರ ಕಾಯ್ದುಕೊಳ್ಳಬೇಕು. ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ಸ್ಯಾನಿಟೈಜರ್‌ ಬಳಸಬೇಕು. ತರಕಾರಿ ಹಾಗೂ ಹಣ್ಣುಗಳನ್ನು ಸರಿಯಾಗಿ ತೊಳೆದು ಬಳಸಬೇಕು. ಕೆಮ್ಮುವಾಗ ಹಾಗೂ ಸೀನುವಾಗ ಮೂಗು ಹಾಗೂ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಆಗಾಗ್ಗೆ ಮುಟ್ಟಿದ ಸ್ಥಳವನ್ನು ಸೋಂಕು ಹರಡದಂತೆ ಸ್ವಚ್ಛವಾಗಿಡಬೇಕು. ಕೋವಿಡ್‌-19 ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ತಲೆನೋವು, ಗಂಟಲು ಬೇನೆ ಹಾಗೂ ಇತರೆ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಪರೀಕ್ಷೆ ಮಾಡಿಸಬೇಕೆಂದು ಡಾ.ದಿಲೀಶ್‌ ಸಾಸಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
 

Follow Us:
Download App:
  • android
  • ios