ಕೊರೋನಾ ಕೇಸ್‌ ಹೆಚ್ಚಳ: ಪರಿಸ್ಥಿತಿ ಹೀಗೆ ಮುಂದುವರೆದ್ರೆ ಕಾದಿದೆ ಗಂಡಾಂತರ..!

ಪರಿಸ್ಥಿತಿ ಹೀಗೆ ಇದ್ದರೆ 15 ದಿನದಲ್ಲಿ 2ನೇ ಅಲೆ| ರಾಜ್ಯದಲ್ಲಿ ಕೊರೋನಾ ಕೇಸ್‌ ಹೆಚ್ಚಳ ಹಿನ್ನೆಲೆಯಲ್ಲಿ ತಜ್ಞರ ಎಚ್ಚರಿಕೆ| ಶುಕ್ರವಾರ 677 ಮಂದಿಗೆ ಸೋಂಕು, 427 ಜನ ಮಾತ್ರ ಗುಣಮುಖ| ಬೆಂಗಳೂರಲ್ಲಿ 40 ದಿನಗಳ ನಂತರ 400ಕ್ಕಿಂತ ಹೆಚ್ಚು ಕೇಸ್‌; ಮತ್ತೆ ಆತಂಕ ಹುಷಾರ್‌| ಸಕ್ರಿಯ ಸೋಂಕಿತರ ಸಂಖ್ಯೆ 6,374ಕ್ಕೆ ಏರಿಕೆ| 

Health experts Talks Over Corona 2nd Wave in Karnataka grg

ಬೆಂಗಳೂರು(ಮಾ.06): ರಾಜ್ಯದಲ್ಲಿ ಕೋವಿಡ್‌-19ರ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರಿದರೆ 10-15 ದಿನಗಳಲ್ಲಿ ರಾಜ್ಯಕ್ಕೆ ಕೋವಿಡ್‌ನ ಎರಡಲೇ ಅಪ್ಪಳಿಸುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಶುಕ್ರವಾರ 677 ಹೊಸ ಪ್ರಕರಣಗಳು ವರದಿಯಾಗಿದ್ದು ನಾಲ್ವರು ಮೃತರಾಗಿದ್ದಾರೆ. 427 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಿದ ಕಾರಣ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 6,374ಕ್ಕೆ ಏರಿಕೆ ಆಗಿದೆ.

ಇನ್ನು ಬೆಂಗಳೂರಿನಲ್ಲಿ ಜನವರಿಯ ಬಳಿಕ ಮತ್ತೆ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 400 ದಾಟಿದೆ. ಉಳಿದಂತೆ ಮೊದಲ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದ ಮೈಸೂರು, ಉಡುಪಿ, ದಕ್ಷಿಣ ಕನ್ನಡ, ಕಲಬುರಗಿ ಜಿಲ್ಲೆಗಳಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಿದೆ.

ಜನವರಿ 23 ರಂದು 900ಕ್ಕೂ ಹೆಚ್ಚು ಸೋಂಕು ಪ್ರಕರಣ ವರದಿಯಾಗಿತ್ತು. ಆ ಬಳಿಕ ಸೋಂಕು ಕಡಿಮೆಯಾಗಿತ್ತು. ಶುಕ್ರವಾರ 600ಕ್ಕಿಂತ ಹೆಚ್ಚು ಸೋಂಕು ಪ್ರಕರಣ ಗೋಚರಿಸಿದೆ. ಹಾಗೆಯೇ ಹದಿನೈದು ದಿನದ ಬಳಿಕ ಪಾಸಿಟಿವಿಟಿ ದರ ಕೂಡ ಶೇ. 0.80ನ್ನು ದಾಟಿದೆ. ಫೆಬ್ರವರಿಯ ಮಧ್ಯ ಭಾಗದಲ್ಲಿ 400ರ ಅಸುಪಾಸಿನಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ 500ಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದೆ. ಇದು ಎರಡನೇ ಅಲೆಯ ಆತಂಕವನ್ನು ಪುಷ್ಟೀಕರಿಸುತ್ತಿದೆ.

7 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು: ಶಾಲೆಗೆ ಬೀಗ, ಹೆಚ್ಚಿದ ಆತಂಕ

ಜನರ ನಿರ್ಲಕ್ಷ್ಯ:

ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಕೋವಿಡ್‌ ಹರಡದಂತೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಲ್ಲಿ ಜನರು ತೀರಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್‌ ಧಾರಣೆ, ಕೈಗೆ ಸ್ಯಾನಿಟೈಸರ್‌ ಬಳಸುವುದು ವಿರಳವಾಗುತ್ತಿದೆ. ಮಾಸ್ಕ್‌ ಧರಿಸಿದವರನ್ನು ವಿಚಿತ್ರವಾಗಿ ಕಾಣುವ, ತಮಾಷೆ ಮಾಡುವ ಪೃವೃತ್ತಿಯನ್ನು ಜನರು ಬೆಳೆಸಿಕೊಂಡಿದ್ದು. ಇದು ಕೋವಿಡ್‌ ಮತ್ತೆ ಚಿಗಿತುಕೊಳ್ಳಲು ಕಾರಣವಾಗುತ್ತಿದೆ ಎಂದು ಆರೋಗ್ಯ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೂಡ ಮಾರ್ಗಸೂಚಿಯನ್ನು ಪ್ರಕಟಿಸುತ್ತಿದೆಯೇ ಹೊರತು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಜನದಟ್ಟಣೆ ನಿಯಂತ್ರಣ, ಸಾಮಾಜಿಕ ಅಂತರದ ಪಾಲನೆಯ ಹೊಣೆಯನ್ನು ಜನರ ಮೇಲೆ ಹೊರಿಸಿ ಕೈ ತೊಳೆದುಕೊಂಡಿದೆ. ಸಮುದಾಯ ಪ್ರತಿರೋಧ ಶಕ್ತಿ ಹೆಚ್ಚೆಂದರೆ ಶೇ.70ಜನರಲ್ಲಿ ಮಾತ್ರ ಸೃಷ್ಟಿಯಾಗಿರಲು ಸಾಧ್ಯ. ಉಳಿದ ಶೇ. 30ರಷ್ಟುಅಂದರೂ ರಾಜ್ಯದ ಮಟ್ಟಿಗೆ ಒಂದೂವರೆ ಕೋಟಿಯಷ್ಟುಜನರಾಗುತ್ತಾರೆ. ಅವರಿಗೆ ಕೋವಿಡ್‌ ಹಬ್ಬುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಸರ್ಕಾರ ನಿರ್ಲಕ್ಷ್ಯ ಮಾಡದೇ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್‌ಗೆ ಲಸಿಕೆ ಬಂದಿದೆ ಎಂಬುದು ಕೂಡ ಜನ ಮೈಮರೆಯಲು ಒಂದು ಕಾರಣ. ಆದರೆ ಲಸಿಕೆ ಪಡೆದರೂ ರೋಗ ನಿರೋಧಕತೆ ಬರಲು ಕನಿಷ್ಠ 40 ರಿಂದ 60 ದಿನ ಬೇಕು. ಈ ಅವಧಿಯಲ್ಲಿ ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕನಿಷ್ಠ ಆರು ತಿಂಗಳ ಕಾಲ ಜನರು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಜಯದೇದ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 6,374 ಸಕ್ರಿಯ ಪ್ರಕರಣಗಳಿದ್ದು 112 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.53 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದ್ದು 9.35 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 12,354 ಮಂದಿ ಮೃತರಾಗಿದ್ದಾರೆ.

ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೊರೋನಾ: ಶುರುವಾಯ್ತು ಆತಂಕ

ಬೆಂಗಳೂರು ನಗರದಲ್ಲಿ ಇಬ್ಬರು ಮೃತರಾಗಿದ್ದು ಬೀದರ್‌ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಮರಣವನ್ನಪ್ಪಿದ್ದಾರೆ. ಯಾದಗಿರಿ ಮತ್ತು ರಾಮನಗರದಲ್ಲಿ ಹೊಸ ಪ್ರಕರಣಗಳು ಕಂಡು ಬಂದಿಲ್ಲ. ಬೆಂಗಳೂರು ನಗರದಲ್ಲಿ 444, ಕಲಬುರಗಿ 37, ತುಮಕೂರು 28, ಮೈಸೂರು 23, ಉಡುಪಿ 22, ದಕ್ಷಿಣ ಕನ್ನಡದಲ್ಲಿ 20 ಹೊಸ ಪ್ರಕರಣಗಳು ವರದಿಯಾಗಿದೆ.

ಕಳೆದ 708 ದಿನಗಳಿಂದ ಕೋವಿಡ್‌ ನ ಏರಿಕೆ ಪ್ರವೃತ್ತಿ ಕಾಣುತ್ತಿದೆ. ಶೇ.20ರಷ್ಟುಕೇಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಕೇರಳ ಮತ್ತು ಮಹಾರಾಷ್ಟ್ರವನ್ನು ಗಮನಿಸಿದರೆ ನಮ್ಮಲ್ಲಿನ ಎರಡನೇ ಅಲೆಯ ಆರಂಭದ ಲಕ್ಷಣ ಎಂದು ಇದನ್ನು ಹೇಳಲೂಬಹುದು. ದೈನಂದಿನ ಪ್ರಕರಣಗಳ ಸಂಖ್ಯೆ 1,500 ರಿಂದ 2,000ಕ್ಕೆ ಏರಿದರೆ ನಾವು ಎರಡನೇ ಅಲೆ ಎಂದು ಪರಿಗಣಿಸಬಹುದು. ಈ ಬಗ್ಗೆ 2-3 ವಾರದಲ್ಲಿ ನಮಗೆ ಸ್ಪಷ್ಟಚಿತ್ರಣ ಸಿಗಲಿದೆ. ಮದುವೆ, ಜಾತ್ರೆ, ರಾಜಕೀಯ ಸಮಾವೇಶ, ಪ್ರತಿಭಟನೆಗಳಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸುತ್ತಿರುವುದು ಎದ್ದು ಕಾಣುತ್ತಿದೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios