ಪ್ರತಿಭಾ ಕಾರಂಜಿಯಲ್ಲಿ ಮಕ್ಕಳಿಗೆ ಧಾರ್ಮಿಕ ಸ್ಪರ್ಧೆ: ವಿವಾದ
2022-23ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಡಿ ‘ಧಾರ್ಮಿಕ ಪಠಣ’ ಸ್ಪರ್ಧೆ ಆಯೋಜನೆ
ಬೆಂಗಳೂರು(ಜು.29): ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ಅರೇಬಿಕ್ ಭಾಷೆಯಲ್ಲಿ ಕುರಾನ್, ಸಂಸ್ಕೃತದಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಧಾರ್ಮಿಕ ಪಠಣ ಸ್ಪರ್ಧೆಗೆ ಆಯ್ಕೆ ಮಾಡಿರುವುದು ಕೆಲ ಶಿಕ್ಷಣ ತಜ್ಞರು ಹಾಗೂ ಪೋಷಕ ಸಂಘಟನೆಗಳಿಂದ ಟೀಕೆಗೆ ಗುರಿಯಾಗಿದೆ. ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ (ಹಿಂದಿ, ಮರಾಠಿ, ತೆಲುಗು, ತಮಿಳು) ಭಾಷಾ ಶಾಲೆಗಳ ನಿರ್ದೇಶನಾಲಯವು 2022-23ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಡಿ ‘ಧಾರ್ಮಿಕ ಪಠಣ’ ಸ್ಪರ್ಧೆ ಆಯೋಜಿಸಿದೆ. ರಾಜ್ಯದಲ್ಲಿ 889 ಪ್ರೌಢಶಾಲೆ ಹಾಗೂ 6061 ಪ್ರಾಥಮಿಕ ಶಾಲೆಗಳು ಈ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕೃತ ಭಗವದ್ಗೀತೆಯ ಶ್ಲೋಕ ಹಾಗೂ ಅರೇಬಿಕ್ ಭಾಷೆಯಲ್ಲಿ ಕುರಾನ್‌ನ ವಿವಿಧ ಅಧ್ಯಾಯಗಳ ಮೇಲೆ ಧಾರ್ಮಿಕ ಪಠಣ ಸ್ಪರ್ಧೆ ಏರ್ಪಡಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
1ರಿಂದ 10ನೇ ತರಗತಿ ಉರ್ದುಯೇತರ ಅಲ್ಪಸಂಖ್ಯಾತ ಶಾಲಾ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ, ಮುಸ್ಲಿಂ ಸಮುದಾಯದ 1ರಿಂದ 10ನೇ ತರಗತಿ ಮಕ್ಕಳಿಗೆ ಕುರಾನ್ ಪಠಣ ಸ್ಪರ್ಧೆ ಆಯೋಜಿಸಲು ಸೂಚಿಸಲಾಗಿದೆ. ಆದರೆ ಸರ್ಕಾರದ ಸೂಚನೆಯು ಶಾಲಾ ಮಕ್ಕಳಲ್ಲಿ ಧರ್ಮಭೇದ ಮಾಡುವಂತಿದೆ ಎಂದು ಪ್ರೊ. ವಿ.ಪಿ.ನಿರಂಜನಾರಾಧ್ಯ, ಪ್ರೊ.ಜಿ.ರಾಮಕೃಷ್ಣ, ಡಾ.ವಸುಂಧರಾ ಭೂಪತಿ ಸೇರಿದಂತೆ ವಿವಿಧ ಶಿಕ್ಷಣ ತಜ್ಞರು, ಲೇಖಕರು ಹಾಗೂ ಪೋಷಕರ ಸಮನ್ವಯ ವೇದಿಕೆಯ ಬಿ.ಎನ್.ಯೋಗಾನಂದ ಆಕ್ಷೇಪಿಸಿದ್ದಾರೆ.
Border Dispute; ಮರಾಠಿ ಯುವಸಮೂಹ ಸೆಳೆಯಲು ಶಿವಾಜಿ ವಿದ್ಯಾಪೀಠ 'ಉಚಿತ ಶಿಕ್ಷಣ ಅಸ್ತ್ರ'..!
‘ನಮ್ಮ ಸಂವಿಧಾನವು ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸಿರುವುದರಿಂದ ಸಾರ್ವಜನಿಕ ಸಂಸ್ಥೆಗಳಲ್ಲಿ ಆದಷ್ಟು ಧರ್ಮ ಹಾಗೂ ಸಂಪ್ರದಾಯದ ವಿಷಯಗಳನ್ನು ತರದಿರುವುದು ಒಳ್ಳೆಯದು. ಹಾಗಾಗಿ ಧಾರ್ಮಿಕ ವಿಚಾರಗಳ ಬದಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ಭಾರತದ ಸಂವಿಧಾನ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳಿಂದ ಆಯ್ದ ಪ್ರಸ್ತಾವನೆ, ಸಮಾಜ ಸುಧಾರಕರು, ಕವಿಗಳು, ದಾರ್ಶನಿಕರು ರಚಿಸಿರುವ ಮಾನವನ ಘನತೆ ಮತ್ತು ಸಮಾನತೆಯನ್ನು ಎತ್ತಿ ಹಿಡಿಯಲು ರಚಿಸಿದ ಪದ್ಯ, ಗದ್ಯ ಅಥವಾ ಕವನಗಳನ್ನು ಸ್ಪರ್ಧೆಗೆ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.