ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ
ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಸರ್ಕಾರವೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿರುವ ಮಾದರಿಯಲ್ಲೇ ಶಾಲಾ ಶಿಕ್ಷಣಕ್ಕೂ ಹೊಸ ನೀತಿ ಜಾರಿಗೊಳಿಸುವ ಚಿಂತನೆಯಿದ್ದು, ಈ ಬಗ್ಗೆ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರು (ಜು.12): ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಸರ್ಕಾರವೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿರುವ ಮಾದರಿಯಲ್ಲೇ ಶಾಲಾ ಶಿಕ್ಷಣಕ್ಕೂ ಹೊಸ ನೀತಿ ಜಾರಿಗೊಳಿಸುವ ಚಿಂತನೆಯಿದ್ದು, ಈ ಬಗ್ಗೆ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣದಲ್ಲೂ ಎನ್‌ಇಪಿ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿ ಕರ್ನಾಟಕ ಪಠ್ಯಕ್ರಮ ಚೌಕಟ್ಟನ್ನು (ಕೆಸಿಎಫ್) ರಚಿಸುವ ಪ್ರಕ್ರಿಯೆ ಹಿಂದಿನ ಸರ್ಕಾರದಲ್ಲಿ ಆರಂಭವಾಗಿತ್ತು. ಇದನ್ನು ನಿಲ್ಲಿಸಿ, ರಾಜ್ಯದ್ದೇ ಹೊಸ ನೀತಿ ರಚನೆಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಸಮಿತಿಯೊಂದನ್ನು ರಚಿಸಿ ವರದಿ ಪಡೆಯಲಾಗುವುದು. ಆ ಸಮಿತಿಯು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ವರದಿ ನೀಡಬಹುದು ಎಂದರು.
ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಎಫೆಕ್ಟ್: ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ
ಮುಂದಿನ ವರ್ಷ ಮತ್ತೆ ಪಠ್ಯ ಪರಿಷ್ಕರಣೆ: ಸಮಯದ ಅಭಾವದಿಂದಾಗಿ ಈ ಬಾರಿ ಕೆಲ ತರಗತಿಯ ಪಠ್ಯಪುಸ್ತಕಗಳಲ್ಲಿ ಆಕ್ಷೇಪಗಳಿದ್ದ ಪ್ರಮುಖ ಪಾಠಗಳನ್ನಷ್ಟೇ ಪರಿಷ್ಕರಿಸಲಾಗಿದೆ. ಬಲಪಂಥೀಯ ಚಿಂತಕರ ಪಾಠಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆಯಲಾಗಿದೆ. ಇನ್ನು ಕೆಲ ಪಾಠಗಳಲ್ಲಿನ ಕೆಲ ಪದ, ವಾಕ್ಯಗಳ ಬಗ್ಗೆ ಆಕ್ಷೇಪಗಳಿದ್ದರೂ ವಿದ್ಯಾರ್ಥಿಗಳಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಪರಿಷ್ಕರಿಸಲು ಹೋಗಿಲ್ಲ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಹೊಸದೊಂದು ಸಮಿತಿ ರಚಿಸಿ ಎಲ್ಲ ತರಗತಿಯ ಪಠ್ಯಪುಸ್ತಕಗಳನ್ನೂ ಪರಿಶೀಲಿಸಿ ಯಾವುದೇ ವಿಷಯದಲ್ಲಿ ಸೈದ್ದಾಂತಿಕವಾದ ಅಂಶಗಳು, ಪದ, ವಾಕ್ಯಗಳಿದ್ದರೆ ಅವುಗಳನ್ನು ಪರಿಷ್ಕರಿಸುವ ಕೆಲಸ ಮಾಡಲಾಗುವುದು. ಹೊಸ ಸಮಿತಿ ರಚಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಸಚಿವರು ಹೇಳಿದರು.
ಬೆಂಗಳೂರಲ್ಲಿ ತಪ್ಪಿದ ಭಾರೀ ದುರಂತ: ಟೆಕ್ನಿಕಲ್ ಸಮಸ್ಯೆಯಿಂದ ಸೇನಾ ವಿಮಾನ ತುರ್ತು ಭೂಸ್ಪರ್ಶ
ಅನಧಿಕೃತ ಶಾಲೆಗಳಿಗೆ ಸಮಯಾವಕಾಶ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ವಿವಿಧ ನಿಯಮಗಳ ಉಲ್ಲಂಘನೆ ಆಧಾರದಲ್ಲಿ ಗುರುತಿಸಲಾಗಿದ್ದ ಅನಧಿಕೃತ ಶಾಲೆಗಳಿಗೆ ಕಾನೂನಾತ್ಮಕವಾಗಿ ತಮ್ಮ ಮಾನದಂಡಗಳನ್ನು ಅನುಸರಿಸಲು, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶ ವಿಸ್ತರಿಸಲಾಗಿದೆ. ಅವಕಾಶ ನೀಡದೆ ಅಂತಹ ಶಾಲೆಗಳನ್ನು ಒಮ್ಮೆಲೆ ಮುಚ್ಚುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ, ತಪ್ಪು ಸರಿಪಡಿಸಿಕೊಳ್ಳದಿದ್ದರೆ ಮುಂದೆ ಅಂತಹ ಶಾಲೆಗಳಲ್ಲಿ ಪ್ರವೇಶಕ್ಕೇ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಇಲಾಖೆ ಆಯುಕ್ತರಾದ ಕಾವೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿಂಧು ರೂಪೇಶ್ ಇದ್ದರು.