ಬೆಂಗಳೂರು(ಮಾ.20): ರಾಜ್ಯದ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ 2021-22ನೇ ಸಾಲಿನ ಕಾಮೆಡ್‌-ಕೆ ಪ್ರವೇಶ ಪರೀಕ್ಷೆ (ಯುಜಿಇಟಿ) ಜೂನ್‌ 20ರಂದು ನಡೆಯಲಿದೆ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ (ಕಾಮೆಡ್‌-ಕೆ) ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್‌, ಜೂನ್‌ 20ಕ್ಕೆ ಕಾಮೆಡ್‌-ಕೆ ಯುಜಿಇಟಿ ನಡೆಸಲು ನಿರ್ಧರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು www.comedk.org ಅಥವಾ www.unigauge..com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮಾ.22ರಿಂದ ಮೇ 20ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ದೇಶಾದ್ಯಂತ 150 ನಗರಗಳಲ್ಲಿ ಒಟ್ಟು 400 ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಕಾಮೆಡ್‌-ಕೆ ಅಡಿ ನೋಂದಾಯಿತ 180 ಕಾಲೇಜುಗಳಲ್ಲಿ 21 ಸಾವಿರ ಸೀಟುಗಳು ಲಭ್ಯವಿದ್ದವು. ದೇಶಾದ್ಯಂತ 63 ಸಾವಿರ ವಿದ್ಯಾರ್ಥಿಗಳು ಯುಜಿಇಟಿಗೆ ನೋಂದಾಯಿಸಿಕೊಂಡಿದ್ದರಾದರೂ ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ 4900 ಸೀಟುಗಳು ಮಾತ್ರ ಭರ್ತಿಯಾಗಿ 16 ಸಾವಿರದಷ್ಟುಸೀಟುಗಳು ಬಾಕಿ ಉಳಿದಿವೆ. ಈ ವರ್ಷ 80 ಸಾವಿರ ಅಭ್ಯರ್ಥಿಗಳ ನೋಂದಣಿ ನಿರೀಕ್ಷಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಅನುಸಾರ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುವುದು. 30 ಪ್ಯಾನ್‌ ಇಂಡಿಯಾ ವಿಶ್ವವಿದ್ಯಾಲಯಗಳು ಕೂಡ ಕಾಮೆಡ್‌-ಕೆ ಪರೀಕ್ಷಾ ಫಲಿತಾಂಶವನ್ನು ಪ್ರವೇಶಕ್ಕೆ ಪರಿಗಣಿಸುತ್ತವೆ ಎಂದರು.

ದೇಶದ ಟಾಪ್‌ 10 ಖಾಸಗಿ ವಿವಿಗಳಲ್ಲಿ ರೇವಾಗೆ ಸ್ಥಾನ

ಒಪ್ಪಂದದಂತೆ ಕೌನ್ಸೆಲಿಂಗ್‌:

ಪ್ರತಿ ಬಾರಿಯಂತೆ ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಪ್ರಕಟಿಸುವ ಕೌನ್ಸೆಲಿಂಗ್‌ ವೇಳಾಪಟ್ಟಿಗೆ ಕಾಯುವುದಿಲ್ಲ. ಕೆಇಎ ಸಾಕಷ್ಟು ಒತ್ತಡವಿರುತ್ತದೆ. ಹಾಗಾಗಿ ಕೌನ್ಸೆಲಿಂಗ್‌ ದಿನಾಂಕ ಪ್ರಕಟಣೆ ವಿಳಂಬವಾಗಬಹುದು. ಕೆಲವು ಸಲ ಪರಿಷ್ಕರಿಸಲ್ಪಡುತ್ತದೆ. ಕೆಇಎ ವೇಳಾಪಟ್ಟಿಗೆ ಕಾಯುತ್ತಾ ಕೂತರೆ ಕಾಮೆಡ್‌-ಕೆ ಸೀಟುಗಳು ಭರ್ತಿಗೆ ಪೆಟ್ಟು ಬೀಳುತ್ತದೆ. ಹಾಗಾಗಿ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ನಿಗದಿ ದಿನದಲ್ಲಿ ನಮ್ಮ ಸೀಟುಗಳಿಗೆ ಕೌನ್ಸೆಲಿಂಗ್‌ ಮುಗಿಸುತ್ತೇವೆ ಎಂದು ಇದೇ ವೇಳೆ ಕುಮಾರ್‌ ಸ್ಪಷ್ಟಪಡಿಸಿದರು.