ಇಂದಿನಿಂದ ರಾಜ್ಯಾದ್ಯಂತ ಕಾಲೇಜು ಶುರು: ಯಾವೆಲ್ಲ ನಿಯಮ ಪಾಲಿಸಬೇಕು..?
* ಭೌತಿಕ ತರಗತಿಗಳ ಜತೆ ಆನ್‌ಲೈನ್ ತರಗತಿಗಳೂ ಮುಂದುವರಿಕೆ
* ಎಲ್ಲಾ ಕೋವಿಡ್ ಮಾರ್ಗಸೂಚಿ ಅನುಸರಿಸಿ ತರಗತಿಗಳು ಆರಂಭ
* ಲಸಿಕೆ ಪಡೆಯದ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ್ಲ
ಬೆಂಗಳೂರು(ಜು.26): ಬರೋಬ್ಬರಿ ನಾಲ್ಕು ತಿಂಗಳ ನಂತರ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಶಿಕ್ಷಣದ ಭೌತಿಕ ತರಗತಿಗಳು ಸೋಮವಾರದಿಂದ ಪುನಾರಂಭವಾಗಲಿವೆ.
ಭೌತಿಕ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ರಾಜ್ಯದ ಎಲ್ಲ ಕಾಲೇಜುಗಳ ಕೊಠಡಿಗಳನ್ನು ಸಜ್ಜುಗೊಳಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೋವಿಡ್ ನಿಯಮಗಳ ಪ್ರಕಾರ ತರಗತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಕಾಲೇಜುಗಳನ್ನು ಕಡ್ಡಾಯವಾಗಿ ತೆರೆಯಬೇಕು ಮತ್ತು ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಬೋಧಕ, ಬೋಧಕೇತರ ಸಿಬ್ಬಂದಿಗೆ ಮೊದಲ ಕೋರೊನಾ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಲಸಿಕೆ ಪಡೆದ ವಿದ್ಯಾರ್ಥಿಗಳಷ್ಟೇ ಕಾಲೇಜಿಗೆ ಆಗಮಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ಲಸಿಕೆ ಪಡೆಯದವರು ಕಾಲೇಜಿಗೆ ಆಗಮಿಸುವಂತಿಲ್ಲ. ಆದ್ದರಿಂದ ಭೌತಿಕ ತರಗತಿ ಆರಂಭವಾದರೂ ಆನ್ ಲೈನ್‌ಕ್ಲಾಸ್ ಮುಂದುವರಿಯಲಿದೆ.
ಭಾರೀ ಪ್ರವಾಹ : 10ನೇ ತರಗತಿ ಕೆಓಎಸ್ ಪರೀಕ್ಷೆ ಮುಂದೂಡಲು ಮನವಿ
ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶೇ.80 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದ್ದು ಶೀಘ್ರದಲ್ಲೇ ಉಳಿದ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ. ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸದಿದ್ದರೂ ಪ್ರಾಧ್ಯಾಪಕರು ಕಡ್ಡಾಯವಾಗಿ ಕಾಲೇಜುಗಳಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.
ರಾಜ್ಯದ 24 ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು, 17 ಡೀಮ್ಡ್ ವಿವಿಗಳು, ಇತರೆ ಖಾಸಗಿ ವಿವಿಗಳು ಮತ್ತು ಅವುಗಳ ಸಂಯೋಜಿತ 415 ಸರ್ಕಾರಿ ಪದವಿ ಕಾಲೇಜು, 1800 ಖಾಸಗಿ ಪದವಿ ಕಾಲೇಜು, 339 ಅನುದಾನಿತ ಪದವಿ ಕಾಲೇಜು, ನೂರಾರು ಇಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಕಾಲೇಜುಗಳಲ್ಲಿ ಎಲ್ಲ ಕೊಠಡಿ, ಕಚೇರಿಗಳ ಸ್ವಚ್ಛತೆ, ಸ್ಯಾನಿಟೈಸಿಂಗ್ ಸೇರಿದಂತೆ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆ ಆರಂಭವರೆಗೆ ಆನ್‌ಲೈನ್ ಕ್ಲಾಸ್‌ಗೆ ಹೈಕೋರ್ಟ್ ನಿಶಾನೆ
2021 ರ ಮಾರ್ಚ್‌ನಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾದಾಗ ಮಾ.23 ರಿಂದ ಭೌತಿಕ ತರಗತಿಗಳನ್ನು ಬಂದ್ ಮಾಡಿ ಆನ್‌ಲೈನ್ ತರಗತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಕೊರೋನಾ ಸೋಂಕು ತಹಬದಿಗೆ ಬಂದಿರುವುದರಿಂದ ಪುನಃ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ಕಾಲೇಜು ಪ್ರಾರಂಭಕ್ಕೆ ಮಾರ್ಗಸೂಚಿಗಳೇನು?, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಯಾವೆಲ್ಲ ನಿಯಮ ಪಾಲಿಸಬೇಕು..?
* ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು
* ಲಸಿಕೆ ಹಾಕಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶವಿಲ್ಲ
* ಯಾವುದೇ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರೋದು ಕಡ್ಡಾಯ ಅಲ್ಲ
* ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಕಾಲೇಜಿಗೆ ಬರಬೇಕು
* ಕಾಲೇಜು ಪ್ರಾರಂಭ ಆದ್ರೂ ಆನ್ ಲೈನ್ ಕ್ಲಾಸ್ ಮುಂದುವರಿಯಲಿದೆ
* ಆನ್‌ಲೈನ್/ಆಫ್‌ಲೈನ್ ಯಾವುದಾದರೂ ಒಂದಕ್ಕೆ ಹಾಜರಾತಿ ಕಡ್ಡಾಯ
* ಹಾಜರಾತಿಯನ್ನ ವಿದ್ಯಾರ್ಥಿಗಳು ಆಯ್ಕೆಗೆ ಬಿಟ್ಟ ಸರ್ಕಾರ
* ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗಕ್ಕೆ 2 ಡೋಸ್ ಲಸಿಕೆ ಕಡ್ಡಾಯ
* ಪ್ರತಿ ಕಾಲೇಜಿನಲ್ಲೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಕ್ರಮವಹಿಸಿಬೇಕು
* ಕಾಲೇಜಿಗೆ ಬರೋ ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು
* ಕಾಲೇಜು ಆರಂಭ, ನಂತರ ಸ್ಯಾನಿಟೈಸರ್ ಕಡ್ಡಾಯ
* ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾಲೇಜು ಆಡಳಿತ ಮಂಡಳಿ ಕ್ರಮವಹಿಸಬೇಕು
* ಕಾಲೇಜು, ವಿವಿ ಆವರಣದಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭಿಸಬೇಕು
* ಕಾಲೇಜು, ವಿವಿಗಳಲ್ಲಿ ಈಜು ಕೊಳಗಳ ಪ್ರಾರಂಭಕ್ಕೆ ನಿಷೇಧ
* ಲೈಬ್ರರಿಗಳಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು
* ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿ ಪಾಲನೆ ಕಡ್ಡಾಯ