ಬೆಂಗಳೂರು(ಮೇ.21): ಕೊರೋನಾ ಸೋಂಕಿನಿಂದ ಮೃತಪಟ್ಟವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನೋಡಿಕೊಳ್ಳಲಿದೆ ಎಂದು ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ಇಡೀ ನಾಡನ್ನು ಕೊರೋನಾ ಸೋಂಕು ಬಾಧಿ​ಸುತ್ತಿದೆ. ಸೋಂಕಿನಿಂದ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಶಿಕ್ಷಣದ ಜತೆ ಆಶ್ರಯದ ಕೊರತೆ ಎದುರಾಗಿದೆ. ಈ ವಿಚಾರಗಳು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಅನ್ನ, ಅಕ್ಷರ, ಆರೋಗ್ಯ ವಿಚಾರದಲ್ಲಿ ಮುಂದಿರುವ ಮಠದಲ್ಲೇ ಅಂತಹ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ತಂದೆ- ತಾಯಿ ಮತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಇನ್ನಿತರ ಮಾಹಿತಿಗಾಗಿ ಬೆಂಗಳೂರಿನ ದೂರವಾಣಿ ಸಂಖ್ಯೆ 94480 71803 ಇಲ್ಲವೇ ಆದಿಚುಂಚನಗಿರಿ ಮಠದ ದೂರವಾಣಿ 91480 24141ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

'ಕೋವಿಡ್‌ನಿಂದ ಮೃತ ಶಿಕ್ಷಕರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿ'

ಕೊರೋನಾ ಸಂಕಷ್ಟದ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಿರುವ ಮಠವು, ಬೆಂಗಳೂರು ಆಯುರ್ವೇದಿಕ್‌ ಕಾಲೇಜಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌, ಬೆಳ್ಳೂರು ಕ್ರಾಸ್‌ ಆದಿಚುಂಚನಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರಿಗೆ ಸಾರಿಗೆ ವ್ಯವಸ್ಥೆ ಹಾಗೂ ಔಷ​ಧ ಕಿಟ್‌ಗಳ ವಿತರಣೆ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಿದೆ ಎಂದು ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona