ಬಳ್ಳಾರಿ: ಅಪಾಯದಲ್ಲಿ ಸರ್ಕಾರಿ ಶಾಲೆ, ಆತಂಕದಲ್ಲೇ ಮಕ್ಕಳ ನಿತ್ಯ ಕಲಿಕೆ..!
ಅವಘಡ ಸಂಭವಿಸಿದರೆ ಯಾರು ಹೊಣೆ?, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ನಿದರ್ಶನ
ಬಳ್ಳಾರಿ(ಸೆ.14): ಇಲ್ಲಿನ ಬಾಪೂಜಿ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅಪಾಯದ ಆತಂಕದಲ್ಲಿಯೇ ಮಕ್ಕಳ ಕಲಿಕೆ ಮುಂದುವರಿದಿದೆ. ತರಗತಿ ಕೋಣೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮಳೆಗಾಲದಲ್ಲಿ ಎಲ್ಲ ಕೋಣೆಗಳು ಸೋರುತ್ತವೆ. ಇದರಿಂದ ದಿನದಿನಕ್ಕೆ ಕಟ್ಟಡ ಮತ್ತಷ್ಟುಶಿಥಿಲಗೊಳ್ಳುತ್ತಿದೆ.
1ರಿಂದ 8ನೇ ತರಗತಿವರೆಗಿನ ಈ ಶಾಲೆಯಲ್ಲಿ 307 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 12 ತರಗತಿ ಕೋಣೆಗಳು ಇದ್ದು, ಈ ಪೈಕಿ 6 ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಉಳಿದವು ಮಳೆಗಾಲದಲ್ಲಿ ಸೋರಿಕೆಯಾಗುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಇರುವ ಕೋಣೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅಪಾಯದಲ್ಲಿರುವ ಕೋಣೆಗಳನ್ನು ಗ್ರಂಥಾಲಯ, ಅಡುಗೆ ಕೋಣೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
Bengaluru: ಬಿಬಿಎಂಪಿಯಿಂದ 10 ಕಡೆ ‘ಸಂಜೆ ಶಾಲೆ’ ಆರಂಭ
15 ವರ್ಷದಲ್ಲಿ ಸೋರಿಕೆ:
ಬಾಪೂಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 9 ಕೋಣೆಗಳನ್ನು ನಿರ್ಮಿಸಲಾಗಿದೆ. ಇದಾದ ಒಂದು ವರ್ಷದ ಅವಧಿಯಲ್ಲಿ ಮೂರು ಕೋಣೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಕೇವಲ ಹದಿನೈದೇ ವರ್ಷಕ್ಕೆ ಸೋರುತ್ತಿವೆ. ಶಾಲೆಯ ಕಟ್ಟಡವು ಅಪಾಯದಲ್ಲಿ ಇರುವುದರಿಂದ ಶಾಲೆಗೆ ಕಳಿಸಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆ ಸೋರುತ್ತಿದೆ. ಗೋಡೆ ಬಿರುಕು ಬಿಟ್ಟಿದ್ದು ಒಳಗಡೆ ಕುಳಿತು ಪಾಠ ಕೇಳಲು ಭಯವಾಗುತ್ತಿದೆ. ಆಟವಾಡಲು ಮೈದಾನವಿಲ್ಲ.ಯಾವಾಗಲೂ ಶಾಲೆಯಲ್ಲಿಯೇ ಇರುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಪ್ರಾರ್ಥನೆಗೂ ಜಾಗವಿಲ್ಲ:
ಈ ಶಾಲೆಗೆ ಆವರಣವಿಲ್ಲ. ಪ್ರಾರ್ಥನೆ ಮಾಡಲು ಸಹ ಜಾಗವಿಲ್ಲ. ಓಣಿಯ ಪುಟ್ಟಜಾಗದಲ್ಲಿಯೇ ಪ್ರಾರ್ಥನೆ ಮಾಡಲಾಗುತ್ತಿದ್ದು, ದನ-ಕರುಗಳು, ಆಟೋ,ದ್ವಿಚಕ್ರ ವಾಹನಗಳು ಓಡಾಡುತ್ತಿರುವುದರಿಂದ ಬೆಳಗಿನ ಪ್ರಾರ್ಥನೆಗೂ ಕಷ್ಟವಾಗಿದೆ. ಮೈದಾನವಿಲ್ಲವಾದ್ದರಿಂದ ಸದಾ ಮಕ್ಕಳನ್ನು ತರಗತಿ ಕೋಣೆಯಲ್ಲಿಯೇ ಕೂಡ್ರಿಸುತ್ತಾರೆ. ಕೂಡಲೇ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಶಾಲೆಯ ಕಟ್ಟಡಗಳು ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಸೋರುತ್ತಿವೆ. ಅನಿವಾರ್ಯವಾಗಿ ಸೋರುವ ಕೋಣೆಯಲ್ಲಿಯೇ ಪಾಠ ಮಾಡುತ್ತಿದ್ದೇವೆ. ಕಟ್ಟಡದ ಸ್ಥಿತಿಗತಿ ಕುರಿತು ಇಲಾಖೆಯ ಅಧಿಕಾರಿಗಳಿಗೆ ಪ್ರತಿ ವರ್ಷವೂ ಪತ್ರ ಬರೆಯಲಾಗುತ್ತಿದೆ ಅಂತ ಬಳ್ಳಾರಿಯ ಬಾಪೂಜಿ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಗೀತಾ ತಿಳಿಸಿದ್ದಾರೆ.