*   ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ*  20 ಚಿನ್ನದ ಪದಕ ಪಡೆದ ಮೈಸೂರು ವಿವಿಯ ಮೊದಲ ವಿದ್ಯಾರ್ಥಿನಿ ಚೈತ್ರಾ*  ಇಬ್ಬರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ 

ಮೈಸೂರು(ಸೆ.08): ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಮಂಗಳವಾರ ಎಂಎಸ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚೈತ್ರಾ ನಾರಾಯಣ ಹೆಗಡೆಗೆ 20 ಚಿನ್ನದ ಪದಕ ಹಾಗೂ ಕನ್ನಡ ಎಂ.ಎ.ಯಲ್ಲಿ ಹೆಚ್ಚಿನ ಅಂಕಗಳಿಸಿದ ಚಾಮರಾಜನಗರದ ಟಿ.ಎಸ್‌. ಮಾದಲಾಂಬಿಕೆಗೆ ಹತ್ತು ಚಿನ್ನದ ಪದಕ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಚೈತ್ರಾ ನಾರಾಯಣ ಹೆಗಡೆ 20 ಚಿನ್ನದ ಪದಕ ಪಡೆದ ಮೈಸೂರು ವಿವಿಯ ಮೊದಲ ವಿದ್ಯಾರ್ಥಿನಿ. ಕೃಷಿ ಕುಟುಂಬದಿಂದ ಬಂದ ಚೈತ್ರಾ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಬೇಕು ಎಂಬ ಬಯಕೆ ಹೊಂದಿದ್ದಾರೆ. ಅವರಿಗೆ ನಾಲ್ಕು ನಗದು ಬಹುಮಾನ ಕೊಡ ದೊರಕಿದೆ. ಇನ್ನು ಎಂಎ ಕನ್ನಡದಲ್ಲಿ ಅಂಧ ವಿದ್ಯಾರ್ಥಿನಿ ಎಚ್‌.ಎನ್‌.ಲತಾ 1 ಚಿನ್ನದ ಪದಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಆನ್‌ಲೈನ್‌ನಲ್ಲೇ ಪಿಎಚ್‌ಡಿ ಕೋರ್ಸ್‌ : ಮೈಸೂರು ವಿವಿ ನಿರ್ಧಾರ

ಇಬ್ಬರಿಗೆ ಗೌ.ಡಾ: 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಾಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ, ಪದ್ಮಭೂಷಣ ಡಾ. ಗೋವಿಂದರಾಜನ್‌ ಪದ್ಮನಾಭನ್‌ ಮತ್ತು ರಾಜ್ಯ ಸರ್ಕಾರದ ವಿಷನ್‌ ಗ್ರೂಪ್‌ ಫಾರ್‌ ಸ್ಟಾರ್ಟಫ್ಸ್‌ನ ಅಧ್ಯಕ್ಷ ಹಾಗೂ ಆಕ್ಸೆಲ್‌ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್‌ ಪ್ರಕಾಶ್‌ ಅವರಿಗೆ ಇದೇ ವೇಳೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಧ್ಯಕ್ಷತೆಯಲ್ಲಿ ನಡೆದ ಘಟಿಕೋತ್ಸವದಲ್ಲಿ ಸಿಎಸ್‌ಐಆರ್‌ನ ಮಹಾನಿರ್ದೇಶಕ ಡಾ. ಶೇಖರ್‌ ಸಿ.ಮಂಡೆ ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಇತರರು ಪಾಲ್ಗೊಂಡಿದ್ದರು.