ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿಯ ಪರೀಕ್ಷೆ ರದ್ದು ಪರೀಕ್ಷೆಗಳನ್ನು ರದ್ದುಪಡಿಸಿರುವುದಕ್ಕೆ ಸುಪ್ರೀಂಕೋರ್ಟ್‌ ಸಂತಸ  ವಿದ್ಯಾರ್ಥಿಗಳಿಗೆ ಯಾವ ಮಾನದಂಡಗಳ ಆಧಾರದ ಮೇಲೆ ಅಂಕ 

ನವದೆಹಲಿ (ಜೂ.04): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿರುವುದಕ್ಕೆ ಸುಪ್ರೀಂಕೋರ್ಟ್‌ ಸಂತಸ ವ್ಯಕ್ತಪಡಿಸಿದೆ. ಜೊತೆಗೆ, ಈ ವರ್ಷ ವಿದ್ಯಾರ್ಥಿಗಳಿಗೆ ಯಾವ ಮಾನದಂಡಗಳ ಆಧಾರದ ಮೇಲೆ ಅಂಕ ನೀಡುತ್ತೀರಿ ಎಂಬುದನ್ನು ತಿಳಿಸಿ ಎಂದು ಸಿಬಿಎಸ್‌ಇ ಮತ್ತು ಐಸಿಎಸ್‌ಇಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

ಆದರೆ, ಇದೇ ವೇಳೆ ರಾಜ್ಯ ಸರ್ಕಾರಗಳೂ ಕೂಡ ರಾಜ್ಯ ಪಠ್ಯಕ್ರಮದ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಈಗಲೇ ಪರಿಗಣನೆಗೆ ತೆಗೆದುಕೊಳ್ಳಲು ನಿರಾಕರಿಸಿರುವ ಸುಪ್ರೀಂಕೋರ್ಟ್‌, ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

CBSE 12ನೇ ಕ್ಲಾಸ್ ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ ಎಂದ ಪ್ರಧಾನಿ! .

‘12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ನಮಗೆ ಸಂತಸ ತಂದಿದೆ. ಆದರೆ, ವಿದ್ಯಾರ್ಥಿಗಳಿಗೆ ಯಾವ ಮಾನದಂಡಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ ಎಂಬುದು ಕೂಡ ಅಷ್ಟೇ ಮುಖ್ಯ. ಅದರ ಬಗ್ಗೆ ನಮಗೆ 2 ವಾರದಲ್ಲಿ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ತಡ ಮಾಡಬಾರದು. ತಡ ಮಾಡಿದರೆ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಭಾರತ ಹಾಗೂ ವಿದೇಶಗಳಲ್ಲಿ ಪ್ರವೇಶ ಪಡೆಯಲು ತೊಂದರೆಯಾಗುತ್ತದೆ’ ಎಂದು ನ್ಯಾ

ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಪೀಠ ಗುರುವಾರದ ವಿಚಾರಣೆಯ ವೇಳೆ ಹೇಳಿತು.

ಕೊರೋನಾ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ. ವಿಚಾರಣೆಯ ವೇಳೆ ಅರ್ಜಿದಾರರಾದ ಮಮತಾ ಶರ್ಮಾ ಅವರು ರಾಜ್ಯಗಳಿಗೂ ಈ ಪರೀಕ್ಷೆ ರದ್ದುಪಡಿಸಲು ನಿರ್ದೇಶನ ನೀಡಬೇಕೆಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮಗೆ ತಾಳ್ಮೆ ಇರಬೇಕು. ಹೀಗೆ ಗಡಿಬಿಡಿ ಮಾಡಬಾರದು. ನೀವು ಸಿಬಿಎಸ್‌ಇ ಪರೀಕ್ಷೆ ಮಾತ್ರ ರದ್ದುಪಡಿಸಲು ಕೇಳಿದ್ದಿರಿ. ಈಗ ರಾಜ್ಯಗಳ ಪರೀಕ್ಷೆಯನ್ನೂ ರದ್ದುಪಡಿಸಲು ಕೇಳುತ್ತಿದ್ದೀರಿ. ಮೊದಲು ಸಿಬಿಎಸ್‌ಇ ತನ್ನ ವಿದ್ಯಾರ್ಥಿಗಳಿಗೆ ಯಾವ ಅಂಶಗಳ ಆಧಾರದ ಮೇಲೆ ಅಂಕ ನೀಡುತ್ತದೆ ಎಂಬುದನ್ನು ನೋಡೋಣ. ನಂತರ ಇತರ ಮಂಡಳಿಗಳ ಬಗ್ಗೆ ವಿಚಾರ ಮಾಡೋಣ’ ಎಂದು ತಿಳಿಸಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona