ಪಠ್ಯ ಪರಿಷ್ಕರಣೆ ವಿವಾದ: ದೇವೇಗೌಡರ ಮನೆಗೇ ಹೋಗಿ ಪಠ್ಯ ವಿವರಣೆ ಕೊಟ್ಟಿದ್ದೇವೆ, ನಾಗೇಶ್‌

*   ಕುವೆಂಪು ಪಠ್ಯ ಕುರಿತು ಗೌಡರಿಗೆ ಏನೇನೋ ಹೇಳಿಬಿಟ್ಟಿದ್ದರು
*  ಗೌಡರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸ ನನಗಿದೆ
*  ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದ್ದು 2017ರಲ್ಲಿ

BC Nagesh React on HD Devegowda Letter to CM About Textbook Revision in Karnataka grg

ತುಮಕೂರು(ಜೂ.26):  ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರಿಗೆ ಸತ್ಯ ಮನವರಿಕೆ ಆಗಿದೆ ಎಂದು ಭಾವಿಸಿದ್ದೇನೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಪಠ್ಯ ಪರಿಷ್ಕರಣೆ, ಕುವೆಂಪು ಅವರ ವಿಷಯಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಮಾಜಿ ಪ್ರಧಾನಿಗಳಾದ ದೇವೇಗೌಡರು ಹಿರಿಯರು, ಗೌರವಾನ್ವಿತರು. ಹೀಗಾಗಿ ಅವರ ಮನೆಗೇ ಹೋಗಿ ವಿವರಣೆ ನೀಡಿ ಬಂದಿದ್ದೇನೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸ ನನಗಿದೆ. ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೋ ಹೇಳಿ ಬಿಟ್ಟಿದ್ದರು, ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ. ಪಠ್ಯಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪನವರು 169 ಪುಟಗಳಲ್ಲಿ 150 ತಪ್ಪುಗಳನ್ನು ಮಾಡಿದ್ದರು. ನಮ್ಮ ಕಾಲದಲ್ಲಿ ಕೇವಲ 17 ತಪ್ಪುಗಳಷ್ಟೇ ಆಗಿವೆ, ಅದನ್ನು ಸರಿ ಮಾಡಿದ್ದೇವೆ ಎಂದರು.

ಕುವೆಂಪು ಕವನಗಳನ್ನು ನಾಡಗೀತೆ, ರೈತಗೀತೆ ಮಾಡಿದ್ದು ಬಿಜೆಪಿ: ಸದಾನಂದಗೌಡ

ಶಿಕ್ಷಣ ಇಲಾಖೆ ಹೆಸರು ಬದಲು:

ಎನ್‌ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಪ್ರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಾಗಿ ಬದಲಾಯಿಸಲಾಗಿದೆ. ಹಾಲಿ ಇರುವ ಡಿಡಿಪಿಐಗಳು ಏನಾಗುತ್ತಾರೆ ಎಂಬ ಪ್ರಶ್ನೆಗೆ, ಆ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದರು.

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರಿಷ್ಕೃತ ಪಠ್ಯಪುಸ್ತಕ ಹರಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಆಕಸ್ಮಾತ್‌ ಪುಸ್ತಕ ಕಾಲಿಗೆ ತಾಕಿದರೆ ನಾವು ಕಣ್ಣಿಗೆತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಆದರೆ ಡಿ.ಕೆ.ಶಿವಕುಮಾರ್‌ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದ್ದು 2017ರಲ್ಲಿ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದರು. ಡಿ.ಕೆ.ಶಿವಕುಮಾರ್‌ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ದರೆ, ಅಂದೇ ಕ್ರಮ ಕೈಗೊಳ್ಳಬೇಕಿತ್ತು. ಆಗ ಪ್ರಕರಣ ಕುರಿತು ಸರ್ಕಾರ ಬಿ ರಿಪೋರ್ಚ್‌ ಹಾಕಿತ್ತು. ಈ ಎಲ್ಲಾ ವಿಚಾರವನ್ನು ದೇವೇಗೌಡರಿಗೆ ತಿಳಿಸಿ ಬಂದಿದ್ದೇನೆ ಎಂದು ನಾಗೇಶ್‌ ಮಾಹಿತಿ ನೀಡಿದರು.
 

Latest Videos
Follow Us:
Download App:
  • android
  • ios