26 ಸಾವಿರ ಶಿಕ್ಷಕರ ನೇಮಕ ರದ್ದು: ಚುನಾವಣಾ ಸಮಯದಲ್ಲಿ ದೀದಿ ಸರ್ಕಾರಕ್ಕೆ ಹೈಕೋರ್ಟ್ ಬಿಗ್ ಶಾಕ್
ಪ. ಬಂಗಾಳದಲ್ಲಿ 2016ರಲ್ಲಿ ನಡೆದಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕಲ್ಕತ್ತಾ ಹೈಕೋರ್ಟ್ ‘ಅಕ್ರಮ’ ಎಂದು ತೀರ್ಪು ನೀಡಿ, ರದ್ದುಗೊಳಿಸಿದೆ. ಇದರಿಂದಾಗಿ 25,753 ಶಿಕ್ಷಕರು ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ
ಕೋಲ್ಕತಾ: ಪ. ಬಂಗಾಳದಲ್ಲಿ 2016ರಲ್ಲಿ ನಡೆದಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕಲ್ಕತ್ತಾ ಹೈಕೋರ್ಟ್ ‘ಅಕ್ರಮ’ ಎಂದು ತೀರ್ಪು ನೀಡಿ, ರದ್ದುಗೊಳಿಸಿದೆ. ಇದರಿಂದಾಗಿ 25,753 ಶಿಕ್ಷಕರು ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಮತ್ತು ಅಕ್ರಮ ವಿಧಾನದಲ್ಲಿ ನೇಮಕಗೊಂಡ ಶಿಕ್ಷಕರಿಗೆ 12% ಬಡ್ಡಿಯೊಂದಿಗೆ ಎಲ್ಲ ಸಂಬಳ ಹಿಂತಿರುಗಿಸುವಂತೆ ಆದೇಶಿಸಲಾಗಿದೆ.
ಇದರಿಂದಾಗಿ ಶಿಕ್ಷಕರ ನೇಮಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಆದರೆ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಖುದ್ದು ಮಮತಾ ಹಾಗೂ ಪ.ಬಂಗಾಳ ಶಿಕ್ಷಕರ ನೇಮಕ ಆಯೋಗದ ಅಧ್ಯಕ್ಷ ಸಿದ್ಧಾರ್ಥ್ ಮಜುಂದಾರ್ ಘೋಷಿಸಿದ್ದಾರೆ. ಆದರೆ ಆದೇಶವನ್ನು ಬಿಜೆಪಿ ನಾಯಕರು ಹಾಗೂ ನೌಕರಿ ಆಕಾಂಕ್ಷಿಗಳು ಸ್ವಾಗತಿಸಿದ್ದಾರೆ.
ಕೋರ್ಟ್ ಹೇಳಿದ್ದೇನು?:
ಖಾಲಿ ಒಎಂಆರ್ ಶೀಟ್‌ಗಳನ್ನು ಶಿಕ್ಷಕ ನೇಮಕಾತಿ ಆಕಾಂಕ್ಷಿಗಳು ಸಲ್ಲಿಸಿದ್ದು, ಆದರೂ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ರೀತಿ ಕಾನೂನುಬಾಹಿರವಾಗಿ ಇವರ ನೇಮಕ ನಡೆದಿದೆ. ಈ ಶಾಲಾ ಶಿಕ್ಷಕರು 4 ವಾರಗಳಲ್ಲಿ ತಮ್ಮ ವೇತನವನ್ನು ಹಿಂದಿರುಗಿಸಬೇಕು ಎಂದು ನ್ಯಾ। ದೇಬಂಗ್ಸು ಬಸಕ್ ಮತ್ತು ನ್ಯಾ। ಮೊಹಮ್ಮದ್ ಶಬ್ಬರ್ ರಶೀದಿ ಅವರ ವಿಭಾಗೀಯ ಪೀಠ ಹೇಳಿದೆ. ಈ ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.
ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಈ ನ್ಯಾಯಪೀಠವು ತನ್ನ ಆದೇಶದಲ್ಲಿ ವಿನಾಯಿತಿ ನೀಡಿದೆ. ಅಂದರೆ, ನೇಮಕಗೊಂಡವರಲ್ಲಿ ಸೋಮಾ ದಾಸ್ ಎಂಬ ಕ್ಯಾನ್ಸರ್‌ಪೀಡಿತರಿದ್ದು, ಅವರನ್ನು ಮಾನವೀಯ ಆಧಾರದ ಮೇಲೆ ಕೆಲಸದಲ್ಲಿ ಉಳಿಸಿಕೊಳ್ಳಲು ಸೂಚಿಸಿದೆ.
ಅಲ್ಲದೆ, ನೇಮಕಾತಿ ಪ್ರಕ್ರಿಯೆ ಬಗ್ಗೆ ಹೆಚ್ಚಿನ ತನಿಖೆ ನಡೆಸಿ 3 ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ ಹಾಗೂ ಶಿಕ್ಷಕರ ನೇಮಕದ ಹೊಣೆ ಹೊಂದಿರುವ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗಕ್ಕೆಎ (ಡಬ್ಲುಬಿಎಸ್‌ಎಸ್‌ಸಿ) ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತಾಕೀತು ಮಾಡಿದೆ.
ರಾಜಕೀಯ ಕೆಸರೆರಚಾಟ:
ಸಿಎಂ ಮಮತಾ ಬ್ಯಾನರ್ಜಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ನ್ಯಾಯಾಂಗ ಮತ್ತು ತೀರ್ಪುಗಳ ಮೇಲೆ ಬಿಜೆಪಿ ನಾಯಕರು ಪ್ರಭಾವ ಬೀರುತ್ತಿದ್ದಾರೆ. ವಾರದ ಹಿಂದೆಯೇ ಹೀಗೇ ಆದೇಶ ಬರಲಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದೇ ಇದಕ್ಕೆ ಸಾಕ್ಷಿ. 26 ಸಾವಿರ ಜನರ ಅನ್ನವನ್ನು ಅವರು ಕಿತ್ತುಕೊಂಡಿದ್ದಾರೆ’ ಎಂದು ಮಮತಾ ಕಿಡಿಕಾರಿದ್ದಾರೆ. ಆದರೆ ಆದೇಶವನ್ನು ಬಿಜೆಪಿ ಸ್ವಾಗತಿಸಿದ್ದು, ‘ಇದು ಇನ್ನಷ್ಟು ಟಿಎಂಸಿ ನಾಯಕರು ಜೈಲಿಗೆ ಹೋಗುವ ಸಮಯ. ಅರ್ಹ ಅಭ್ಯರ್ಥಿಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ’ ಎಂದು ಪ್ರತಿಕ್ರಿಯಿಸಿದೆ.
ಏನಿದು ಹಗರಣ?:
24,640 ಖಾಲಿ ಶಿಕ್ಷಕ ಹುದ್ದೆಗಳಿಗೆ 2016ರಲ್ಲಿ ಪರೀಕ್ಷೆ ನಡೆದಿತ್ತು. 23ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆಗೆ ಆಗ ಹಾಜರಾಗಿದ್ದರು. ಪರೀಕ್ಷೆಯ ನಂತರ ಖಾಲಿ ಹುದ್ದೆಗಳಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 25,753 ಮಂದಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು. ಇದು 9, 10, 11 ಮತ್ತು 12ನೇ ತರಗತಿಗಳ ಶಿಕ್ಷಕರು ಮತ್ತು ಗುಂಪು-ಸಿ ಮತ್ತು ಡಿ ಸಿಬ್ಬಂದಿಗಳ ಹುದ್ದೆಗಳನ್ನು ಒಳಗೊಂಡಿತ್ತು.
ಆದರೆ ಕೆಲವು ಶಿಕ್ಷಕ ಹುದ್ದೆ ಆಕಾಂಕ್ಷಿಗಳು ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾ। ಅಭಿಜಿತ್ ಗಂಗೂಲಿ (ಈಗ ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ) ಸಿಬಿಐ ತನಿಖೆಗೆ ಆದೇಶಿಸಿದ್ದರು ಮತ್ತು ಅಕ್ರಮ ಕಂಡುಬಂದ ಶಿಕ್ಷಕರ ನೇಮಕ ರದ್ದತಿಗೆ ಸೂಚಿಸಿದ್ದರು.
ಆದರೆ ನಂತರ ಹೈಕೋರ್ಟ್ ಆದೇಶದ ವಿರುದ್ಧ ಪ.ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್. ನೇಮಕಾತಿ ಪ್ರಕರಣದಲ್ಲಿ ಅರ್ಜಿಗಳು ಮತ್ತು ಮೇಲ್ಮನವಿಗಳ ವಿಚಾರಣೆಗೆ ವಿಭಾಗೀಯ ಪೀಠವನ್ನು ರಚಿಸುವಂತೆ 2023ರ ನವೆಂಬರ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಸೂಚಿಸಿತ್ತು ಮತ್ತು ನೇಮಕಾತಿಗಳ ರದ್ದತಿಗೆ 6 ತಿಂಗಳ ತಡೆ ನೀಡಿತ್ತು. ಈಗ ವಿಭಾಗೀಯ ಪೀಠದ ತೀರ್ಪು ಹೊರಬಿದ್ದಿದೆ.
ಇದೇ ಹಗರಣದಲ್ಲಿ ಅನೇಕರು ಜೈಲಲ್ಲಿ:
ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಶಿಕ್ಷಣ ಸಚಿವರಾಗಿದ್ದ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಸೇರಿದಂತೆ ಹಲವು ತೃಣಮೂಲ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.