ಎಸ್‌ಎಸ್‌ಎಲ್‌ಸಿ ಕಳಪೆ ಫಲಿತಾಂಶ: ಶಿಕ್ಷಕರ ವಾರ್ಷಿಕ ಬಡ್ತಿ ತಡೆ!
ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಸಾಧನೆಯಿಂದಾಗಿ ವಿಜಯನಗರದ ಡಿಡಿಪಿಐ ಹಾಗೂ ಬಿಇಓ ಅಮಾನತುಗೊಳಿಸುವಂತೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ, ಸಿಇಓ ಅವರಿಗೆ ನೋಟೀಸ್ ಜಾರಿ ಮಾಡುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ, ಯಾದಗಿರಿ ಸಿಇಓ ಅವರ ಈ ಬಡ್ತಿ ತಡೆ ನಡೆ ಅಚ್ಚರಿ ಮೂಡಿಸಿದೆ.
ಯಾದಗಿರಿ(ಜೂ.27): 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ಫಲಿತಾಂಶದ ರಾಜ್ಯದಲ್ಲಿ ಕೊನೆ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ, ಸರ್ಕಾರಿ/ಅನುದಾನಿತ ಪ್ರೌಢಶಾಲಾ ವಿಷಯವಾರು ಶಿಕ್ಷಕರ ಒಂದು ವಾರ್ಷಿಕ ಬಡ್ತಿ ತಡೆಗೆ ಆದೇಶಿಸಿ ಜಿಲ್ಲಾ ಪಂಚಾಯತ್ ಸಿಇಓ ಗರೀಮಾ ಪನ್ವಾರ್ ಆದೇಶಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ವಿಜಯನಗರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಸಾಧನೆಯಿಂದಾಗಿ ವಿಜಯನಗರದ ಡಿಡಿಪಿಐ ಹಾಗೂ ಬಿಇಓ ಅಮಾನತುಗೊಳಿಸುವಂತೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ, ಸಿಇಓ ಅವರಿಗೆ ನೋಟೀಸ್ ಜಾರಿ ಮಾಡುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ, ಯಾದಗಿರಿ ಸಿಇಓ ಅವರ ಈ ಬಡ್ತಿ ತಡೆ ನಡೆ ಅಚ್ಚರಿ ಮೂಡಿಸಿದೆ.
ಎಸ್ಸೆಸ್ಸೆಲ್ಸಿ ರಿಸಲ್ಟ್ ಕುಸಿತ: ಛಾಯಾಪ್ರತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲೂ ಇಳಿಕೆ
ಆದೇಶದಲ್ಲೇನಿದೆ?:
ಫಲಿತಾಂಶ ಸುಧಾರಣೆಗಾಗಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಎಲ್ಲಾ ರೀತಿಯ ಸವಲತ್ತುಗಳು ನೀಡಿದ್ದರೂ ಕೂಡಾ, ಯಾದಗಿರಿ ಜಿಲ್ಲೆಯ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಫಲಿತಾಂಶ ಶೇ. 54.53 ಬಂದಿರುತ್ತದೆ. ವಿಷಯವಾರು ಸರಾಸರಿಕ್ಕಿಂತಲೂ ಫಲಿತಾಂಶ ಕಡಿಮೆ ಬಂದಿರುವ ವಿಷಯ ಶಿಕ್ಷಕರಿಗೆ ಶಾಲಾ ಹಂತದಲ್ಲಿ ನೋಟಿಸ್ ಜಾರಿ ಮಾಡಿ ಉತ್ತರ ಪಡೆಯಲು ಸೂಚಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪ್ರಯುಕ್ತ, ಜಿಲ್ಲಾ ಸರಾಸರಿಕ್ಕಿಂತಲೂ ವಿಷಯವಾರು ಕಡಿಮೆ ಬಂದಿರುವ ಸರಕಾರಿ/ಅನುದಾನಿತ ವಿಷಯ ಶಿಕ್ಷಕರಿಗೆ ಒಂದು ವಾರ್ಷಿಕ ಬಡ್ತಿಯನ್ನು ತಡೆಹಿಡಿಯ ಮುಖ್ಯಗುರುಗಳಿಗೆ ಶಾಲಾ ಹಂತದಲ್ಲಿ ಕ್ರಮ ವಹಿಸಬೇಕೆಂದು ಸಿಇಓ ಪನ್ವಾರ್ ಜೂ.24ರಂದು ಆದೇಶ ಹೊರಡಿಸಿದ್ದಾರೆ.
ಶಿಕ್ಷಕರ ವಲಯದಲ್ಲಿ ಬೇಸರ:
ಶೇ.54.43 =ರಷ್ಟು ಫಲಿತಾಂಶದ ಮೂಲಕ ಯಾದಗಿರಿ ರಾಜ್ಯದಲ್ಲಿ ಕೊನೆಯ 35ನೇ ಸ್ಥಾನದಲ್ಲಿದೆ. ಆದರೆ, ಪ್ರೌಢಶಾಲೆಗಳಲ್ಲಿ 1435 ಶಿಕ್ಷಕರ ಪೈಕಿ, 760 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಹಂತ ಸೇರಿಸಿದರೆ 3 ಸಾವಿರ ಶಿಕ್ಷಕರ ಕೊರತೆ ಜಿಲ್ಲೆಯ ಕಾಡುತ್ತಿದೆ. ಈ ಎಲ್ಲವನ್ನೂ ಸರಿತೂಗಿಸಿಕೊಂಡು, ಪ್ರಾಮಾಣಿಕ ರೀತಿಯ ಫಲಿತಾಂಶ ನೀಡಿದರೂ ಸಹ ತಮ್ಮದಲ್ಲದ ತಪ್ಪಿಗೆ ಬಡ್ತಿ ತಡೆ ಆದೇಶ ಸರಿಯಲ್ಲ ಎಂದು ಶಿಕ್ಷಕರ ವಲಯದಲ್ಲಿ ಬೇಸರ ಮೂಡಿ ಬಂದಿದೆ.
ಈ ಆದೇಶದಿಂದಾಗಿ, ಮೂಲವೇತನ ಆಧರಿಸಿ ಒಬ್ಬ ಶಿಕ್ಷಕರಿಗೆ ವಾರ್ಷಿಕವಾಗಿ ಸಿಗಬೇಕಿದ್ದ ಸುಮಾರು 70-80 ಸಾವಿರ ರು.ಗಳಷ್ಟು ಇನ್ಕ್ರಿಮೆಂಟ್ ಕಡಿತಗೊಳ್ಳುತ್ತದೆ.
ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಪಡೆದು ಸರ್ಕಾರಿ ನೌಕರಿಗೆ ಆಯ್ಕೆಯಾದವನಿಗೆ ಓದು, ಬರಹವೇ ಬರೊಲ್ಲ!
ಜಿಲ್ಲೆಯಲ್ಲಿ ಸುಮಾರು 80 ರಿಂದ100 ರಷ್ಟು ಶಿಕ್ಷಕರ ಬಡ್ತಿ ತಡೆಯಾಗುತ್ತದೆ. ಒಂದು ಅಂದಾಜಿನಂತೆ, ಶಿಕ್ಷಕರಿಗೆ ಸಿಗಬೇಕಿದ್ದ ವಾರ್ಷಿಕ 70 ಲಕ್ಷ ರು.ಗಳ ಹಣ ಕಡಿತವಾದಂತೆ. ಫಲಿತಾಂಶ ಕಳಪೆಗೆ ಶಿಕ್ಷಕರೇ ಕಾರಣ ಅನ್ನೋದು ಸರಿಯಲ್ಲ. ಈ ಆದೇಶವನ್ನು ನಾವು ನಮ್ಮ ರಾಜ್ಯ ಸಂಘದಲ್ಲಿ ಪ್ರಶ್ನಿಸುತ್ತೇವೆ, ಪ್ರತಿಭಟಿಸುತ್ತೇವೆ ಎಂದು ಯಾದಗಿರಿ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕೆಂಭಾವಿ ತಿಳಿಸಿದ್ದಾರೆ.
ರಾಜ್ಯದಲ್ಲಿ 6ನೇ ರ್‍ಯಾಂಕ್ ಯಾದಗಿರಿಯ ಬಾಲಕ
ಜಿಲ್ಲೆಯಲ್ಲಿ ಈ ಬಾರಿ 318 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳ ಪಡೆದಿದ್ದಾರೆ. ಶೇ.80ರಿಂದ 90ರಷ್ಟು ಅಂಕಗಳನ್ನು 880 ವಿದ್ಯಾರ್ಥಿಗಳು ಪಡೆದಿದ್ದಾರೆ. ಅದೇ ತೆರನಾಗಿ, 1,357 ವಿದ್ಯಾರ್ಥಿಗಳು ಶೇ.70ರಿಂದ 80ರಷ್ಟು ಅಂಕಗಳ ಪಡೆದಿದ್ದಾರೆ. ಜಿಲ್ಲೆಯ ಹುಣಸಗಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿ 620 ಅಂಕಗಳ ಪಡೆಯುವ ಮೂಲಕ ರಾಜ್ಯಕ್ಕೇ 6ನೇ ರ್‍ಯಾಂಕ್ ಬಂದಿದ್ದಾನೆ.