ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಆರಂಭ
* ಲಾಕ್‌ಡೌನ್ ತೆರವಾದ 19 ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಆಗಮಿಸಿ ಸಿದ್ಧತೆ ಆರಂಭಿಸಿದ ಶಿಕ್ಷಕರು
* ಭಾರೀ ಶುಲ್ಕ ಪಾವತಿಯ ಹೊರೆ
* ಮೊದಲ ದಿನ ಖಾಸಗಿ ಶಾಲೆಗಳತ್ತ ಸುಳಿಯದ ಪೋಷಕರು
ಬೆಂಗಳೂರು(ಜೂ.16): ರಾಜ್ಯ ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ರಾಜ್ಯ ಪಠ್ಯಕ್ರಮದ ಎಲ್ಲ ಮಾದರಿಯ ಶಾಲೆಗಳಲ್ಲೂ ಮಂಗಳವಾರದಿಂದ (ಜೂ.15) 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ.
ಬೆಂಗಳೂರು ನಗರ, ತುಮಕೂರು, ಬೀದರ್ ಸೇರಿದಂತೆ ಲಾಕ್‌ಡೌನ್ ಸಡಿಲಿಸಲಾಗಿರುವ ಎಲ್ಲ 19 ಜಿಲ್ಲೆಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೊದಲ ದಿನವೇ ಆಗಮಿಸಿದ ಶಿಕ್ಷಕರು ಶಾಲಾ ಸಿದ್ಧತಾ ಕಾರ್ಯ ಆರಂಭಿಸಿದ್ದಾರೆ. ಇದರೊಂದಿಗೆ ಕೋವಿಡ್ 2ನೇ ಅಲೆ ಆರಂಭಗೊಂಡ ವೇಳೆ ಬಂದ್ ಆಗಿದ್ದ ಶಾಲೆಗಳಿಗೆ ಎರಡೂವರೆ ತಿಂಗಳ ಬಳಿಕ ಶಿಕ್ಷಕರು ವಾಪಸ್ಸಾದಂತಾಗಿದೆ.
ರಾಜ್ಯದಲ್ಲಿ ಇನ್ನೂ ರಸ್ತೆ ಸಾರಿಗೆ ಸಂಚಾರ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಬಹಳಷ್ಟುಶಿಕ್ಷಕರು ತಮ್ಮ ಸ್ವಂತ ವಾಹನಗಳಲ್ಲಿ ಶಾಲೆಗಳಿಗೆ ಆಗಮಿಸಿದ್ದರು. ಸ್ವಂತ ವಾಹನ ಇಲ್ಲದವರು ಹಾಗೂ ಕೋವಿಡ್ ಕಾರ್ಯಕ್ಕೆ ನಿಯೋಜಿತ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳಾಗಲಿ, ಬಿಸಿಯೂಟ ತಯಾರಕರು, ಸಹಾಯಕರಾಗಲಿ ಶಾಲೆಗೆ ಬರಲು ಇನ್ನೂ ಅವಕಾಶವಿಲ್ಲದ ಕಾರಣ ಶಿಕ್ಷಕರು ತಾವೇ ಶಾಲಾ ಆವರಣ ಮತ್ತು ಕೆಲ ಕೊಠಡಿಗಳನ್ನು ಸ್ವಚ್ಛಗೊಳಿಸಿದರು. ನಂತರ ಈಗಾಗಲೇ ಸಾಮೂಹಿಕವಾಗಿ ಪಾಸು ಮಾಡಿರುವ 1ರಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ ಉತ್ತಿರ್ಣ ಫಲಿತಾಂಶ ನೀಡಿ ಮುಂದಿನ ತರಗತಿಗೆ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಖಾಸಗಿ ಶಾಲೆಗಳ ಬೋಧನಾ ಶುಲ್ಕ: ರಾಜ್ಯ ಸರ್ಕಾರದಿಂದ ಹೈಕೋರ್ಟ್ಗೆ ಮಧ್ಯಂತರ ಅರ್ಜಿ
ಲಾಕ್ ಜಿಲ್ಲೆಗಳಲ್ಲಿ ತೆರೆಯದ ಶಾಲೆ:
ಇನ್ನು, ಶಿವಮೊಗ್ಗ, ಮಂಡ್ಯ, ಮೈಸೂರು ಸೇರಿದಂತೆ ಲಾಕ್‌ಡೌನ್ ಮುಂದುವರೆಸಿರುವ 11 ಜಿಲ್ಲೆಗಳಲ್ಲಿ ಮಾತ್ರ ಇನ್ನು ಶಾಲೆಗಳನ್ನು ತೆರೆಯಲಾಗಿಲ್ಲ. ಆ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಶಾಲೆಗಳಿಗೆ ಆಗಮಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಶಾಲೆಗಳು ಬಿಕೋ:
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳು ಕೂಡ ಬಾಗಿಲು ತೆರೆದಿದ್ದು ಮಕ್ಕಳ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಕೆಲವೊಂದು ಶಾಲೆಗಳಿಗೆ ಬೆರಳೆಣಿಕೆಯಷ್ಟುಪೋಷಕರು ಆಗಮಿಸಿ ತಮ್ಮ ಮಕ್ಕಳ ಪ್ರವೇಶದ ಬಗ್ಗೆ ಮಾಹಿತಿ ಪಡೆದು ಸಾಗಿದರು ಎಂದು ಕೆಲ ಖಾಸಗಿ ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ವರ್ಷ ಪೋಷಕರ ನೆರವಿಗೆ ಧಾವಿಸಿದ್ದ ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ಶೇ.30ರಷ್ಟು ಕಡಿತಗೊಳಿಸಿತ್ತು.
ಖಾಸಗಿ ಶಾಲೆಗಳು ಈ ಆದೇಶ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಇನ್ನೂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಸರ್ಕಾರ ಈ ವರ್ಷದ ಶುಲ್ಕ ಸಂಬಂಧ ಇನ್ನೂ ಯಾವುದೇ ಆದೇಶ ಪ್ರಕಟಿಸಿಲ್ಲ. ಇತ್ತ ಖಾಸಗಿ ಶಾಲೆಗಳು ಈ ವರ್ಷ ಪೂರ್ಣ ಶುಲ್ಕ ವಸೂಲಿಗೆ ಇಳಿದಿವೆ. ಹಾಗಾಗಿ ಬಹಳಷ್ಟುಪೋಷಕರು ಈಗಲೇ ತಮ್ಮ ಮಕ್ಕಳ ದಾಖಲಾತಿಗೆ ಆಸಕ್ತಿ ತೋರುತ್ತಿಲ್ಲ.