ಖಾಸಗಿ ಪಿಯು ಕಾಲೇಜಲ್ಲಿ ಹೆಚ್ಚುವರಿ ಪ್ರವೇಶಾತಿ ಅವಕಾಶ
- ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ
- ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶದಲ್ಲಿ ಪ್ರತಿ ಸಂಯೋಜನೆಗೆ (ಕಾಂಬಿನೇಷನ್) ಹೆಚ್ಚುವರಿ ದಾಖಲಾತಿ
ಬೆಂಗಳೂರು (ಸೆ.01): ಪ್ರಸಕ್ತ 2021-22ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ರಾಜ್ಯದ ಎಲ್ಲ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶದಲ್ಲಿ ಪ್ರತಿ ಸಂಯೋಜನೆಗೆ (ಕಾಂಬಿನೇಷನ್) ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ಕಲ್ಪಿಸಿದೆ.
ಪ್ರತಿ ವರ್ಷ ಪ್ರಥಮ ಪಿಯುಸಿಗೆ 80 ವಿದ್ಯಾರ್ಥಿಗಳನ್ನು ಒಂದೊಂದು ಕಾಂಬಿನೇಷನ್ ಅಥವಾ ವಿಭಾಗದಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶವಿರುತ್ತಿತ್ತು. 2021-22ನೇ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ಕಾಂಬಿನೇಷನ್ ಅಥವಾ ವಿಭಾಗದಲ್ಲಿ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳು, ಅಂದರೆ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶ ಮಾಡಿಕೊಡಲಾಗಿದೆ. 2020-21ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಿರುವುದರಿಂದ ಪಿಯು ಪ್ರವೇಶಕ್ಕೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಮಕ್ಕಳ ದಾಖಲಾತಿಗೆ ಅನುಮತಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸೆ. 6ರಿಂದ 6-8ನೇ ತರಗತಿಗಳು ಆರಂಭ: ವೇಳಾಪಟ್ಟಿ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಕಾಲೇಜಿನಲ್ಲಿರುವ ಹೆಚ್ಚುವರಿ ಮೂಲಸೌಕರ್ಯಗಳಿಗೆ ತಕ್ಕಂತೆ, ಬೇಡಿಕೆ ಅನುಸಾರ, ಮಂಜೂರಾತಿ ಪಡೆದು ಬೋಧಿಸುತ್ತಿರುವ ಪ್ರತಿ ಸಂಯೋಜನೆಗೆ 20 ಹೆಚ್ಚುವರಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ, ಪ್ರತಿ ವಿಭಾಗಕ್ಕೂ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಲಾಗಿದೆ. ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು ತಮ್ಮ ಹಂತದಲ್ಲೇ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು ಎಂದು ಸೂಚಿಸಿದೆ.