ಮಕ್ಕಳಿಂದ ಶೌಚಾಲಯ ಸ್ವಚ್ಛತೆ ತಪ್ಪಿತಸ್ಥರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಸರ್ಕಾರಿ ಶಾಲೆ ಮಕ್ಕಳಿಂದ ಈ ರೀತಿ ಶೌಚಾಲಯ ಸ್ವಚ್ಛ ಮಾಡಿಸುವುದು ತಪ್ಪು. ಈ ಕೃತ್ಯವನ್ನು ಖಂಡಿಸುತ್ತೇವೆ, ತಪ್ಪಿತಸ್ಥರ ವಿರುದ್ಧ ಕಾನೂನು ಬದ್ಧ ಕ್ರಮ ವಹಿಸಲಾಗುತ್ತದೆ. ಯಾವ ಕಾರಣಕ್ಕೂ ಕ್ರಮದ ವಿಚಾರದಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ. ನಾನು ಸಚಿವನಾದ ಮೇಲೆ ಎರಡನೇ ಪ್ರಕರಣ ಇದಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಜವಾಬ್ದಾರಿಯನ್ನ ನಾನೇ ಹೊತ್ತುಕೊಳ್ಳುತ್ತೇನೆ ಎಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಹೊಸಕೋಟೆ(ಡಿ.24): ಬೆಂಗಳೂರಿನ ಯಶವಂತಪುರ ಕ್ಷೇತ್ರದ ಅಂದ್ರಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಸ್ವಚ್ಛತೆ ಮಾಡಿಸಿದ ಶಿಕ್ಷಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅಂದ್ರಹಳ್ಳಿ ಘಟನೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆ ಮಕ್ಕಳಿಂದ ಈ ರೀತಿ ಶೌಚಾಲಯ ಸ್ವಚ್ಛ ಮಾಡಿಸುವುದು ತಪ್ಪು. ಈ ಕೃತ್ಯವನ್ನು ಖಂಡಿಸುತ್ತೇವೆ, ತಪ್ಪಿತಸ್ಥರ ವಿರುದ್ಧ ಕಾನೂನು ಬದ್ಧ ಕ್ರಮ ವಹಿಸಲಾಗುತ್ತದೆ. ಯಾವ ಕಾರಣಕ್ಕೂ ಕ್ರಮದ ವಿಚಾರದಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ. ನಾನು ಸಚಿವನಾದ ಮೇಲೆ ಎರಡನೇ ಪ್ರಕರಣ ಇದಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಜವಾಬ್ದಾರಿಯನ್ನ ನಾನೇ ಹೊತ್ತುಕೊಳ್ಳುತ್ತೇನೆ ಎಂದರು.
ಉತ್ತಮ ಶಿಕ್ಷಣ ಕೊಡಿಸುವುದು ದೇವರ ಕೆಲಸಕ್ಕೆ ಸಮ: ಸಚಿವ ಮಧು ಬಂಗಾರಪ್ಪ
ಮಾಲೂರು ಘಟನೆ ಮಾಸುವ ಮುನ್ನವೇ ಅಂದ್ರಹಳ್ಳಿಯಲ್ಲಿ ಈ ರೀತಿ ವಿದ್ಯಾವಂತರಿಂದಲೇ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ. ಇದು ಸಮಾಜ ತಲೆತಗ್ಗಿಸುವಂತಹ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಘಟನೆ ಯಾವಾಗ ನಡೆದಿದ್ದು ಎಂದು ಅಧಿಕಾರಿಗಳನ್ನು ಕಳಿಸಿ ಪರಿಶೀಲಿಸಲಾಗುತ್ತದೆ. ಒಂದು ಘಟನೆ ಬಹಿರಂಗವಾದ ನಂತರ ಹಿಂದಿನ ಘಟನೆಗಳು ಬಹಿರಂಗವಾಗುವುದನ್ನು ನೋಡಿದ್ದೇನೆ. ಹಾಗಾಗಿ ಮೊದಲು ಸ್ಥಳಕ್ಕೆ ಅಧಿಕಾರಿಗಳನ್ನುಕಳಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಜನವರಿಯಿಂದ ರಾಗಿ ಮಾಲ್ಟ್
ರಾಜ್ಯದಲ್ಲಿರುವ 1.80 ಕೋಟಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ 5 ಗ್ರಾಂನಷ್ಟು ರಾಗಿಮಾಲ್ಟ್ ಹಾಲಿಗೆ ಮಿಶ್ರಣ ಮಾಡಿ ಕೊಡುವ ಚಿಂತನೆಯಲ್ಲಿದ್ದು ಜನವರಿಯಿಂದಲೇ ಪ್ರಾರಂಭಿಸಲಾಗುವುದು. ಇದರಿಂದ ಮಕ್ಕಳ ದೇಹಕ್ಕೆ ಮತ್ತಷ್ಟು ಪೌಷ್ಟಿಕಾಂಶ ಸಿಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.