ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ: 95.55% ವಿದ್ಯಾರ್ಥಿಗಳು ಹಾಜರು
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರ ಸುಗಮವಾಗಿ ಆರಂಭಗೊಂಡಿದ್ದು, ಮೊದಲ ದಿನದ ಪರೀಕ್ಷೆಗೆ ಶೇ.95.55ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಬೆಂಗಳೂರು (ಮಾ.09): ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರ ಸುಗಮವಾಗಿ ಆರಂಭಗೊಂಡಿದ್ದು, ಮೊದಲ ದಿನದ ಪರೀಕ್ಷೆಗೆ ಶೇ.95.55ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬೆಳಗಾವಿ, ಯಾದಗಿರಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಡಿಬಾರ್, ಬೆಂಗಳೂರಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ ಸ್ವಯಂಪ್ರೇರಿತವಾಗಿ ಅದನ್ನು ಕಳಚಿಟ್ಟು ಪರೀಕ್ಷೆ ಬರೆದಿದ್ದು ಬಿಟ್ಟರೆ ಎಲ್ಲೂ ಗೊಂದಲ, ಗೋಜಲು ಇಲ್ಲದೆ 1109 ಕೇಂದ್ರಗಳಲ್ಲೂ ಸುಸೂತ್ರವಾಗಿ ಪರೀಕ್ಷೆ ನಡೆದಿದೆ.
ಮೊದಲ ದಿನ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗಳು ನಡೆದವು. ಈ ಪರೀಕ್ಷೆಗೆ ನೋಂದಾಯಿಸಿದ್ದ 5,33,797 ವಿದ್ಯಾರ್ಥಿಗಳ ಪೈಕಿ 5,10,026 (ಶೇ.95.55) ಮಂದಿ ಹಾಜರಾಗಿ ಪರೀಕ್ಷೆ ಬರೆದರು. ಉಳಿದ 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಅತಿ ಹೆಚ್ಚು ಕಲಬುರಗಿ ಜಿಲ್ಲೆಯಿಂದ 1539, ವಿಜಯಪುರ 1516, ಬೆಂಗಳೂರು ಉತ್ತರ 1387 ಮತ್ತು ಬೆಂಗಳೂರು ದಕ್ಷಿಣ 1333 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಮೋದಿ ರೋಡ್ ಶೋನಲ್ಲಿ 40 ಸಾವಿರ ಮಂದಿ ಭಾಗಿ: ಜನರನ್ನು ಕರೆತರಲು 4 ಸಾವಿರ ಬಸ್ ವ್ಯವಸ್ಥೆ
ಉಳಿದಂತೆ ಎಲ್ಲ ಕೇಂದ್ರಗಳಲ್ಲೂ ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹಾಜರಾಗಿ ಯಶಸ್ವಿಯಾಗಿ ಪರೀಕ್ಷೆ ಎದುರಿಸಿದ್ದಾರೆ. ಇನ್ನು ಬೆಳಗಾವಿಯ ಚಿಕ್ಕೋಡಿ ಮತ್ತು ಯಾದಗಿರಿಯ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಡಿಬಾರ್ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳು ಫುಲ್ ಖುಷ್: ಪರೀಕ್ಷೆ ಬಳಿಕ ಖುಷಿಯಾಗಿ ಹೊರಬಂದ ವಿದ್ಯಾರ್ಥಿಗಳು, ಕನ್ನಡ ಭಾಷಾ ವಿಷಯದ ಪ್ರಶ್ನೆ ಪತ್ರಿಕೆಯು ಬಹಳ ಸರಳವಾಗಿತ್ತು. ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು (ಎಂಸಿಕ್ಯು) ಹೆಚ್ಚು ನೀಡಲಾಗಿತ್ತು. 20 ಅಂಕಗಳಿಗೆ ಇದ್ದ ಎಲ್ಲ ಪ್ರಶ್ನೆಗಳೂ ಸುಲಭವಾಗಿ ಉತ್ತರ ಹುಡುಕುವಂತಿದ್ದವು. ಎರಡು ಅಂಕದ ಪ್ರಶ್ನೆಗಳನ್ನೂ ಅಷ್ಟೇ ಸುಲಭವಾಗಿ ಕೇಳಲಾಗಿತ್ತು ಎಂದು ವಿದ್ಯಾರ್ಥಿಗಳಾದ ಸೌಮ್ಯಾ, ರಮೇಶ್, ವಿನೋದ್ ಸಂತಸ ವ್ಯಕ್ತಪಡಿಸಿದರು.
ವಿವರಣಾತ್ಮಕ ಉತ್ತರಗಳನ್ನು ಬರೆಯಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಲು ಕಷ್ಟವಾಗುತ್ತಿತ್ತು. ಆದರೆ, ಶಿಕ್ಷಣ ಇಲಾಖೆಯು ಈ ಬಾರಿಯಿಂದ ಅಂತಹ ಪ್ರಶ್ನೆಗಳನ್ನು ಕಡಿತಗೊಳಿಸಿರುವುದು ವಿದ್ಯಾರ್ಥಿಸ್ನೇಹಿ ನಿರ್ಧಾರವಾಗಿದೆ. ನಾವು ಎಂಸಿಕ್ಯು ಮಾದರಿ ಪ್ರಯತ್ನಿಸುತ್ತಿರುವ ಮೊದಲ ಬ್ಯಾಚ್ ಆಗಿದ್ದು, ಮುಂದೆ ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿ ಗುರುಕಿರಣ ಹೇಳಿದರು.
ಕಾಂಗ್ರೆಸ್ ಅವಧಿಯ 59 ಕೇಸ್ ಲೋಕಾಯುಕ್ತ ತನಿಖೆಗೆ ಕೊಡ್ತೇವೆ: ಸಿಎಂ ಬೊಮ್ಮಾಯಿ
ಹಿಜಾಬ್ ಕಳಚಿಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿನಿ: ಬೆಂಗಳೂರಿನ ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯೊಬ್ಬಳು ಇಲಾಖೆಯ ಆದೇಶದಂತೆ ಸ್ವಯಂ ಪ್ರೇರಿತವಾಗಿ ನಿಗದಿತ ಕೊಠಡಿಯಲ್ಲಿ ಹಿಜಾಬ್ ಕಳಚಿಟ್ಟು ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆ ಬರೆದಳು. ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದು ನಿಜ. ಆಕೆಗೆ ಹಿಜಾಬ್ ಕಳಚಿಟ್ಟು ಪರೀಕ್ಷಾ ಕೊಠಡಿಗೆ ಹೋಗಲು ಸೂಚಿಸಲಾಯಿತು. ಆಕೆ ಯಾವುದೇ ವಿರೋಧ ತೋರಲಿಲ್ಲ. ಸ್ವಯಂಪ್ರೇರಣೆಯಿಂದ ಹಿಜಾಬ್ ಕಳಚಿಟ್ಟು ತನಗೆ ನಿಗದಿಯಾಗಿದ್ದ ಕೊಠಡಿಯಲ್ಲಿ ಪರೀಕ್ಷೆ ಬರೆದಳು ಎಂದು ಕಾಲೇಜಿನ ಸಿಬ್ಬಂದಿ ತಿಳಿಸಿದ್ದಾರೆ.