8.7 ಲಕ್ಷ ಮಕ್ಕಳಿಗೆ SSLC ಪರೀಕ್ಷೆ, ರಾಜ್ಯದ 3444 ಕೇಂದ್ರಗಳಲ್ಲಿ ಎಕ್ಸಾಂ
* ರಾಜ್ಯದ 3444 ಕೇಂದ್ರಗಳಲ್ಲಿ ಎಕ್ಸಾಂ
* 8.7 ಲಕ್ಷ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಇಂದಿನಿಂದ ಪರೀಕ್ಷೆ
* ಶಾಲಾ ಸಮವಸ್ತ್ರ ಕಡ್ಡಾಯ
* ಸಿಸಿಟೀವಿ ಕಣ್ಗಾವಲಿನಲ್ಲಿ ನಡೆಯಲಿದೆ ಪರೀಕ್ಷೆ
ಬೆಂಗಳೂರು(ಮಾ.28): ರಾಜ್ಯದಲ್ಲಿ ಭಾರಿ ಸದ್ದು ಮಾಡಿರುವ ಹಿಜಾಬ್ ವಿವಾದದ ನಡುವೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರದಿಂದ ಆರಂಭವಾಗಲಿದ್ದು ಒಟ್ಟು 3444 ಪರೀಕ್ಷಾ ಕೇಂದ್ರಗಳಲ್ಲಿ 8,73,846 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಕೋವಿಡ್ ಕಾರಣದಿಂದ 2020-21ನೇ ಸಾಲಿನ ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಈ ವರ್ಷ ಯಾವುದೇ ಕೋವಿಡ್ ಭೀತಿ ಇಲ್ಲದೆ ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪರೀಕ್ಷಾ ಕೇಂದ್ರ ಸುತ್ತಲ 200 ಮೀಟರ್‌ವರೆಗೆ ಸ್ಥಳೀಯ ಜಿಲ್ಲಾಡಳಿತಗಳು ನಿಷೇಧಾಜ್ಞೆ ಜಾರಿಗೊಳಿಸಿವೆ. ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ಆಯಾ ಶಾಲೆಯ ನಿಗದಿತ ಸಮವಸ್ತ್ರ ತೊಟ್ಟು ಮಾತ್ರವೇ ಪರೀಕ್ಷಾ ಕೇಂದ್ರಗಳಿಗೆ ಬರಬೇಕೆಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟಆದೇಶ ಮಾಡಿದೆ.
ರಾಜ್ಯದ 5,717 ಸರ್ಕಾರಿ ಶಾಲೆಗಳು, 3,412 ಅನುದಾನಿತ ಹಾಗೂ 6,258 ಅನುದಾನರಹಿತ ಶಾಲೆಗಳ ಒಟ್ಟು 15,387 ಪ್ರೌಢಶಾಲೆಗಳಿಂದ ಈ ಬಾರಿ 4,52,732 ಗಂಡು ಮಕ್ಕಳು, 4,21,110 ಹೆಣ್ಣು ಮಕ್ಕಳು ಸೇರಿ ಒಟ್ಟು 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಯ 3,76,685, ಅನುದಾನಿತ ಶಾಲೆಯ 2,23,032, ಅನುದಾನರಹಿತ ಶಾಲೆಗಳ 2,74,129 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ನಾಲ್ವರು ತೃತೀಯ ಲಿಂಗಿಗಳು, 5,307 ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
68 ಸಾವಿರಕ್ಕೂ ಹೆಚ್ಚು ಸಿಬ್ಬಂದಿ:
ಪರೀಕ್ಷಾ ಕರ್ತವ್ಯ ನಿರ್ವಹಿಸಲು ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ಕಾ$್ವಡ್, ಪೊಲೀಸ್ ವಿಭಾಗದಿಂದ ತಲಾ 3444 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೊಠಡಿ ಮೇಲ್ವಿಚಾರಣೆಗಾಗಿ 49,817 ಮಂದಿ, ಪ್ರಶ್ನೆ ಪತ್ರಿಕೆ ವಿತರಣೆಗೆ 1,266 ಮಂದಿ, 377 ಉಪ ಮುಖ್ಯ ಅಧೀಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಮಾನ್ಯತೆ ಇಲ್ಲದ 168 ಶಾಲೆಗಳ 1,896 ಮಕ್ಕಳಿಗೆ ಪರೀಕ್ಷೆ ಅವಕಾಶ
ಮಾನ್ಯತೆ ನವೀಕರಿಸಿಕೊಳ್ಳದ 168 ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿರುವ 1896 ವಿದ್ಯಾರ್ಥಿಗಳಿಗೂ ಅವರ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ನಿಯಮಾನುಸಾರ ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಲು ಶಾಲೆಯ ಮಾನ್ಯತೆ ನವೀಕರಣ ಕಡ್ಡಾಯ. ಆದರೆ, ಈ ಬಾರಿ ವಿವಿಧ ಕಾರಣಗಳಿಂದ 168 ಶಾಲೆಗಳು ಮಾನ್ಯತೆ ನವೀಕರಿಸಿಕೊಂಡಿಲ್ಲ. ಈ ಶಾಲೆಗಳು 1896 ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿ ತರಗತಿ ನಡೆಸಿವೆ. ನಿಯಮಾನುಸಾರ ಇಂತಹ ಶಾಲಾ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ನೀಡುವಂತಿಲ್ಲ. ಆದರೂ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ವರ್ಗಾಯಿಸಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಬಗ್ಗೆ ಭಯ ಇದ್ದರೆ ಕರೆ ಮಾಡಿ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಯಾವುದೇ ಸಮಸ್ಯೆ, ಆತಂಕ, ಭಯ ಇದ್ದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಹಾಯವಾಣಿ ಸಂಖ್ಯೆ 080-23310075/76ಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು. ಪರೀಕ್ಷಾ ದಿನಗಳಲ್ಲಿ ನಿತ್ಯ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನುರಿತ ವಿಷಯಾಧಾರಿತ ಶಿಕ್ಷಕರು ಸಹಾಯವಾಣಿಯಲ್ಲಿ ಲಭ್ಯವಿರುತ್ತಾರೆ ಎಂದು ಮಂಡಳಿ ನಿರ್ದೇಶಕರಾದ ಗೋಪಾಲಕೃಷ್ಣ ತಿಳಿಸಿದ್ದಾರೆ.