* ಈ ಬಾರಿ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ* ಅರ್ಜಿ ಸಲ್ಲಿಸುವಾಗ ಅಗತ್ಯ ಪ್ರಮಾಣ ಪತ್ರಗಳ ಮಾಹಿತಿ ಮಾತ್ರ ದಾಖಲು * ಪ್ರಮಾಣ ಪತ್ರಗಳ ಸ್ಕ್ಯಾನ್‌ ಪ್ರತಿ ಅಪ್‌ಲೋಡ್‌ ಮಾಡುವ ಅವಶ್ಯಕತೆ ಇಲ್ಲ

ಬೆಂಗಳೂರು(ಜೂ.16): 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ವಿದ್ಯಾರ್ಥಿಗಳ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 7000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಮೊಬೈಲ್‌ ಮೂಲಕ ಸಹ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್‌ www.kea.kar.nic.in ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

ಅರ್ಜಿ ಸಲ್ಲಿಸುವಾಗ ಅಗತ್ಯ ಪ್ರಮಾಣ ಪತ್ರಗಳ ಮಾಹಿತಿಯನ್ನು ಮಾತ್ರವೇ ದಾಖಲು ಮಾಡಬೇಕಿದೆ. ಪ್ರಮಾಣ ಪತ್ರಗಳ ಸ್ಕ್ಯಾನ್‌ ಪ್ರತಿ ಅಪ್‌ಲೋಡ್‌ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ಮೊಬೈಲ್‌ನಲ್ಲೇ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ. ಈ ಮೊದಲು ವಿವಿಧ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕಿದ್ದರಿಂದ ಮೊಬೈಲ್‌ನಲ್ಲಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಇಟಿ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ

ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಬಹುತೇಕ ಅಭ್ಯರ್ಥಿಗಳು ತಮ್ಮ ಊರುಗಳಲ್ಲಿ ಉಳಿಸಿದ್ದಾರೆ. ಅಲ್ಲದೆ, ಕಂಪ್ಯೂಟರ್‌ ಕೇಂದ್ರಗಳು ತೆರೆದಿಲ್ಲ. ಹಾಗಾಗಿ ಮೊಬೈಲ್‌ ಮೂಲಕವೇ ಅರ್ಜಿ ಸಲ್ಲಿಸಲು ಸರಳೀಕರಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳ ಮಾಹಿತಿಗೆ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಕೈಪಿಡಿಯನ್ನು ಓದಿಕೊಂಡು ಅರ್ಜಿ ಸಲ್ಲಿಸುವುದು ಸೂಕ್ತ.