5, 8ನೇ ಕ್ಲಾಸ್ ‘ಪಬ್ಲಿಕ್ ಪರೀಕ್ಷೆ’ ಖಾಸಗಿ ಶಾಲೆಗಳಿಗೆ ಚಿಂತೆ..!
ರಾಜ್ಯ ಪಠ್ಯಕ್ರಮದಲ್ಲಿ ಖಾಸಗಿ ಪ್ರಕಾಶಕರಿಂದ ಪುಸ್ತಕ ಖರೀದಿಸಿ ಪಾಠ ಮಾಡಿರುವ ಕೆಲ ಶಾಲೆಗಳು, ಸರ್ಕಾರ ತನ್ನ ಪಠ್ಯ ಆಧರಿಸಿ ಪ್ರಶ್ನೆಪತ್ರಿಕೆ ನೀಡಿದರೆ ಮಕ್ಕಳು ಉತ್ತರಿಸುವುದು ಹೇಗೆ?
ಲಿಂಗರಾಜು ಕೋರಾ
ಬೆಂಗಳೂರು(ಡಿ25): ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ಸರ್ಕಾರ ನೀಡಿದ ಪಠ್ಯಪುಸ್ತಕದ ಬದಲು ಖಾಸಗಿ ಪ್ರಕಾಶನದ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಬೋಧಿಸುತ್ತಿರುವ ಒಂದಷ್ಟು ಖಾಸಗಿ ಶಾಲೆಗಳಿಗೆ ತಲೆನೋವು ಶುರುವಾಗಿದೆ. ಇನ್ನು ರಾಜ್ಯ ಸರ್ಕಾರ ನೀಡಿದ ಪಠ್ಯಪುಸ್ತಕಗಳನ್ನೇ ಬೋಧಿಸಿದ ಖಾಸಗಿ ಶಾಲೆಗಳೂ ಕೂಡ ಮಂಡಳಿ ಪರೀಕ್ಷೆಗೆ ಸಿದ್ಧರಾಗಿಲ್ಲ. ಮಕ್ಕಳೂ ಮಾನಸಿಕವಾಗಿ ಸಿದ್ಧರಾಗಿಲ್ಲ. ಏಕಾಏಕಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು ಎಲ್ಲರಿಗೂ ಗೊಂದಲ ಉಂಟುಮಾಡಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದಿಂದ ರಾಜ್ಯ ಪಠ್ಯಕ್ರಮ ಚೌಕಟ್ಟಿನಡಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಬೇಡಿಕೆಗೆ ಅನುಗುಣವಾಗಿ ಮುದ್ರಿಸಿ ಪ್ರತೀ ವರ್ಷ ಎಲ್ಲ ಸರ್ಕಾರಿ ಶಾಲೆಗಳು ಮತ್ತು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಖಾಸಗಿ ಶಾಲೆಗಳಿಗೂ ಸರಬರಾಜು ಮಾಡುತ್ತದೆ. ಇದರ ನಡುವೆ ಒಂದಷ್ಟುಖಾಸಗಿ ಶಾಲೆಗಳು ಇಲಾಖೆಯ ಪಠ್ಯಗಳಿಗೆ ಕಾಯದೆ ಖಾಸಗಿ ಪ್ರಕಾಶಕರು ರಾಜ್ಯ ಪಠ್ಯಕ್ರಮದ ಚೌಕಟ್ಟು ಅನುಸರಿಸಿಯೇ ತಯಾರಿಸುತ್ತಾರೆನ್ನಲಾದ ಬೇರೆ ಪಠ್ಯಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ಬೋಧನೆ ಮಾಡುತ್ತವೆ.
ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ: ಸಿಎಂ ಬೊಮ್ಮಾಯಿ
ಇದುವರೆಗೆ ಶಾಲಾ ಮಟ್ಟದಲ್ಲೇ ಪರೀಕ್ಷೆ ನಡೆಸುತ್ತಿದ್ದುದರಿಂದ ತಾವು ಬೋಧಿಸಿದ ಪಠ್ಯಪುಸ್ತಕ ಆಧರಿಸಿ ಪ್ರಶ್ನೆಪತ್ರಿಕೆ ನೀಡುತ್ತಿದ್ದವು. ಈಗ ಸರ್ಕಾರ ತಾನು ಸಿದ್ಧಪಡಿಸಿದ ಪಠ್ಯಪುಸ್ತಕಗಳ ಅನುಸಾರ 5 ಮತ್ತು 8ನೇ ತರಗತಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮೂಲಕ ಪ್ರಶ್ನೆ ಪತ್ರಿಕೆ ತಯಾರಿಸಿ ನೀಡುವುದಾಗಿ ಹೇಳಿರುವುದರಿಂದ ಖಾಸಗಿ ಪಠ್ಯಪುಸ್ತಕ ಬೋಧಿಸಿದ ಶಾಲೆಗಳಿಗೆ ಆತಂಕ ಶುರುವಾಗಿದೆ. ಈ ಎರಡು ತರಗತಿ ಮಕ್ಕಳಿಗೆ ಮಂಡಳಿ ಪರೀಕ್ಷೆ ನಡೆಸಿದರೂ ಯಾರನ್ನೂ ಅನುತ್ತಿರ್ಣಗೊಳಿಸುವುದಿಲ್ಲವಾದರೂ ತಮ್ಮ ಮಕ್ಕಳು ಉತ್ತಮವಾಗಿ ಪರೀಕ್ಷೆ ಎದುರಿಸಲಾಗದೆ ಕಲಿಕೆಯಲ್ಲಿ ಹಿಂದುಳಿದಿರುವ ಫಲಿತಾಂಶ ಪಡೆಯುವ ಹಾಗೂ ಮತ್ತೆ ಅವರ ಕಲಿಕೆ ಉತ್ತಮಗೊಳಿಸಲು ಸರ್ಕಾರ ಸಿದ್ಧಪಡಿಸಿದ ಪಠ್ಯಪುಸ್ತಕಗಳನ್ನು ಬೋಧಿಸಬೇಕಾದ ಪರಿಸ್ಥಿತಿ ಎದುರಾಗುವ ಚಿಂತೆ ಶಾಲೆಗಳದ್ದಾಗಿದೆ.
‘ರಾಜ್ಯ ಪಠ್ಯಕ್ರಮದ ಬಹಳಷ್ಟುಖಾಸಗಿ ಅನುದಾನರಹಿತ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 1ರಿಂದ 5ನೇ ತರಗತಿ ವರೆಗೆ ಖಾಸಗಿ ಪ್ರಕಾಶನದ ಪಠ್ಯಪುಸ್ತಕಗಳನ್ನು ಬೋಧಿಸುತ್ತಿವೆ. ಹೀಗಿರುವಾಗ ಶಿಕ್ಷಣ ಇಲಾಖೆಯು ದಿಢೀರನೆ ಈಗ 5 ಮತ್ತು 8ನೇ ತರಗತಿಗೆ ಸರ್ಕಾರದ ಪಠ್ಯಪುಸ್ತಕ ಆಧರಿಸಿ ವಾರ್ಷಿಕ ಪರೀಕ್ಷೆ ನಡೆಸಲು ಮುಂದಾಗಿರುವುದು ಆಶ್ಚರ್ಯವನ್ನುಂಟುಮಾಡಿದೆ’ ಎನ್ನುತ್ತಾರೆ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಪ್ರಭಾಕರ್ ಅರಸ್.
Mangaluru University: ಫಲಿತಾಂಶ ವಿಳಂಬ: ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನಿಸಿದ ಎಬಿವಿಪಿ ಕಿಡಿ!
5 ಮತ್ತು 8ನೇ ತರಗತಿಗೆ ಮಂಡಳಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ನಿರ್ಧಾರ ಸಂಬಂಧ ನಮ್ಮ ಸಂಘಟನೆ ವ್ಯಾಪ್ತಿಯ ಖಾಸಗಿ ಶಾಲೆಗಳ ಅಭಿಪ್ರಾಯ ಸಂಗ್ರಹಿಸಿದ್ದು, ಬಹುತೇಕ ಶಾಲೆಗಳು ಈ ವರ್ಷ ಪರೀಕ್ಷೆ ಬೇಡ ಎಂಬ ನಿಲುವು ವ್ಯಕ್ತಪಡಿಸಿವೆ. ಸರ್ಕಾರ ಈ ವರ್ಷ ಮಂಡಳಿ ಪರೀಕ್ಷೆ ನಡೆಸುವ ನಿರ್ಧಾರ ಕೈಬಿಡಬೇಕು ಅಂತ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಪ್ರಭಾಕರ್ ಅರಸ್ ತಿಳಿಸಿದ್ದಾರೆ.
ಈ ಸಾಲಿನಲ್ಲಿ ಪಠ್ಯ ಪರಿಷ್ಕರಣೆ ಗೊಂದಲದಿಂದ ಶಾಲೆಗಳಿಗೆ ಪಠ್ಯಪುಸ್ತಕಗಳು ಬಂದಿದ್ದು ತಡವಾಗಿದೆ. ಹಾಗಾಗಿ ಮುಂದಿನ ಶೈಕ್ಷಣಿಕ ಸಾಲಿನಿಂದ ಪರೀಕ್ಷೆ ನಡೆಸುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಅಂತ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.