ರಾಜ್ಯದಲ್ಲಿ 45565 ಶಿಕ್ಷಕ ಹುದ್ದೆ ಖಾಲಿ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್
- ರಾಜ್ಯದಲ್ಲಿ 45565 ಶಿಕ್ಷಕ ಹುದ್ದೆ ಖಾಲಿ
- ಫೆಬ್ರವರಿಗೆ ಮತ್ತಷ್ಟುಶಿಕ್ಷಕರ ನೇಮಕ: ನಾಗೇಶ್
- ಕಲ್ಯಾಣ ಕರ್ನಾಟಕದಲ್ಲಿ ಭಾರಿ ಕೊರತೆ: 25 ಮಕ್ಕಳಿಗೆ ಒಬ್ಬ ಶಿಕ್ಷಕ
ವಿಧಾನಸಭೆ ಸೆ.16) : ರಾಜ್ಯದಲ್ಲಿ 45,565 ಶಿಕ್ಷಕರ ಹುದ್ದೆ ಖಾಲಿಯಿದ್ದು, ಈಗಾಗಲೇ 15 ಸಾವಿರ ಶಿಕ್ಷಕರ ಕಾಯಂ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ 6ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಿ ಮುಂದಿನ ವರ್ಷದ ಫೆಬ್ರವರಿ-ಮಾಚ್‌ರ್ ತಿಂಗಳಲ್ಲಿ ಮತ್ತೆ ಹೊಸ ನೇಮಕಾತಿ ಮಾಡಲಾಗುವುದು. ಅಲ್ಲಿಯವರೆಗೆ ಅತಿಥಿ ಶಿಕ್ಷಕರ ಮೂಲಕ ನಿಭಾಯಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
2500 ಪ್ರೌಢಶಾಲಾ ಶಿಕ್ಷಕರ ನೇಮಕ: ಸಚಿವ ನಾಗೇಶ್
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಿ. ಶಿವಣ್ಣ, ನಂಜೇಗೌಡ, ಬಿಜೆಪಿಯ ರಾಜುಗೌಡ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 45,565 ಹುದ್ದೆಗಳು ಖಾಲಿ ಇದ್ದರೆ, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲೇ 18,477 ಹುದ್ದೆ ಖಾಲಿಯಿವೆ. ರಾಜ್ಯದಲ್ಲಿ ಪ್ರತಿ 16 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬರಂತೆ ಶಿಕ್ಷಕರು ಇದ್ದಾರೆ. ಈ ಶಿಕ್ಷಕರ ಕೊರತೆ ತಾತ್ಕಾಲಿಕವಾಗಿ ನೀಗಿಸಲು ಪ್ರಾಥಮಿಕ ಶಾಲೆಗಳಿಗೆ 27 ಸಾವಿರ, ಪ್ರೌಢ ಶಾಲೆಗಳಿಗೆ 5,159 ಸೇರಿದಂತೆ 32,159 ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಜತೆಗೆ 15 ಸಾವಿರ ಕಾಯಂ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, 12-13 ಸಾವಿರ ಶಿಕ್ಷಕರ ನೇಮಕವಾಗುವ ನಿರೀಕ್ಷೆಯಿದೆ. ಹೊಸ ಅಭ್ಯರ್ಥಿಗಳಿಗೂ ಅವಕಾಶ ಸಿಗುವಂತೆ ಮಾಡಲು ನ.6ರಂದು ಟಿಇಟಿ ನಡೆಸಿ ಮುಂದಿನ ವರ್ಷದ ಫೆಬ್ರುವರಿ-ಮಾಚ್‌ರ್‍ನಲ್ಲಿ ಮತ್ತೆ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ:
ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ಸದಸ್ಯ ರಾಜುಗೌಡ, ಶಿಕ್ಷಣ ಸಚಿವರ ಪ್ರಕಾರವೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ದುಪ್ಪಟ್ಟು ಶಿಕ್ಷಕರ ಕೊರತೆ ಇದೆ. ನಮ್ಮ ಕ್ಷೇತ್ರದಲ್ಲಿ 45,550 ವಿದ್ಯಾರ್ಥಿಗಳಿದ್ದು, ಪ್ರತಿ 80 ವಿದ್ಯಾರ್ಥಿಗಳಿಗೆ ಒಬ್ಬರಂತೆಯೂ ಶಿಕ್ಷಕರಿಲ್ಲ. ಎಷ್ಟೋ ಶಾಲೆಗಳಿಗೆ ಕಾಯಂ ಶಿಕ್ಷಕರೇ ಇಲ್ಲ. ಜತೆಗೆ ಸೂಕ್ತ ಕೊಠಡಿಗಳಿಲ್ಲ. ಹೀಗಾದರೆ ಬೇರೆ ಭಾಗದ ಮಕ್ಕಳೊಂದಿಗೆ ನಮ್ಮ ಮಕ್ಕಳು ಹೇಗೆ ಸ್ಪರ್ಧಿಸಲು ಸಾಧ್ಯ? ಮೊದಲು ಸಮಸ್ಯೆ ಬಗೆಹರಿಸಿ. ಇಲ್ಲದಿದ್ದರೆ ನಮ್ಮ ಭಾಗದ ಮಕ್ಕಳಿಗೆ ಪರೀಕ್ಷೆಯೇ ಇಲ್ಲದಂತೆ ಉತ್ತೀರ್ಣ ಮಾಡಲು ಕಾನೂನು ತನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗಳಿಗೆ ಕೊಠಡಿಗಳೇ ಇಲ್ಲ:
ಈ ವೇಳೆ ಕಾಂಗ್ರೆಸ್‌ನ ವೈ. ರಾಮಪ್ಪ ಸೇರಿದಂತೆ ಹಲವರು ಸದಸ್ಯರು, ಕ್ಷೇತ್ರಕ್ಕೆ 20 ಕೊಠಡಿಗಳನ್ನು ಮಾತ್ರ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ತೀವ್ರ ಮಳೆಯಿಂದಾಗಿ ನೂರಾರು ಕೊಠಡಿಗಳು ಹಾಳಾಗಿವೆ. ನೀವು ಅಗತ್ಯ ಕ್ರಮ ಕೈಗೊಳ್ಳುವವರೆಗೂ ಅವರು ಮರ, ಕಟ್ಟೆಗಳ ಮೇಲೆ ತರಗತಿಗಳನ್ನು ಕೇಳಬೇಕು ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 20 ಕೊಠಡಿಗಳು ಸಾಕಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ತುರ್ತು ಅಗತ್ಯವಿರುವ ಸ್ಥಳಗಳ ಬಗ್ಗೆ ಶಾಸಕರಿಂದ ವರದಿ ಪಡೆದು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿ ಎಂದು ಒತ್ತಾಯಿಸಿದರು.\
ಶಿಕ್ಷಣ ಸಚಿವ ನಾಗೇಶ್ ಮೇಲೆ ಭ್ರಷ್ಟಾಚಾರ ಆರೋಪ ಮಾಡಿಲ್ಲ: ಕ್ಯಾಮ್ಸ್
8,100 ಕೊಠಡಿ ನಿರ್ಮಾಣ:
ಬಿ.ಸಿ. ನಾಗೇಶ್ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ 8,100 ಹೊಸ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ಸರ್ಕಾರಗಳಲ್ಲೂ ಪ್ರತಿ ವರ್ಷ ಹೆಚ್ಚು ಸಂಖ್ಯೆಯ ಕೊಠಡಿಗಳನ್ನು ನಿರ್ಮಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈಗಲೂ ಸಮಸ್ಯೆ ಬಗೆಹರಿಸಲು ಸಿದ್ಧವಿದ್ದು, ತುರ್ತು ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.