31 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ಫೋನೇ ಇಲ್ಲ..!
* ರಾಜ್ಯದ 8 ಲಕ್ಷ ಮಕ್ಕಳ ಮನೆಗಳಲ್ಲಿ ದೂರದರ್ಶನ, ರೇಡಿಯೋ ಇಲ್ಲ
* ಜು.1ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ
* ಸರ್ಕಾರದ ಹಂತದಲ್ಲೂ ಫೋನ್ ಖರೀದಿಸಲು ಚಿಂತನೆ
ಬೆಂಗಳೂರು(ಜು.02): ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 93 ಲಕ್ಷ ಮಂದಿ ವಿದ್ಯಾರ್ಥಿಗಳ ಪೈಕಿ 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್ ಇಲ್ಲ. 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ಕನಿಷ್ಠ ಪಕ್ಷ ದೂರದರ್ಶನವಾಗಲಿ, ಇಲ್ಲವೇ ರೇಡಿಯೋ ಆಗಲಿ ಇಲ್ಲ!
ಆಶ್ಚರ್ಯವಾದರೂ ಇದು ಸತ್ಯ. ಸಾರ್ವಜನಿಕ ಶಿಕ್ಷಣ ಇಲಾಖೆಯೇ 2020-21ನೇ ಸಾಲಿನಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಬಹಿರಂಗ ಸತ್ಯವಿದು. ಇದರಿಂದ 31 ಲಕ್ಷ ವಿದ್ಯಾರ್ಥಿಗಳು ಕಳೆದ ವರ್ಷ ಆನ್‌ಲೈನ್ ತರಗತಿ, ಸರ್ಕಾರ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಿದ ಸಂವೇದಾ ಇ-ಪಾಠ, ರೇಡಿಯೋ ಪಾಠ ಯಾವುದೂ ಇಲ್ಲದೆ ಸಂಪೂರ್ಣ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ.
ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ 93,01,805 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 79,33,029 ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಇದೆ. 58,59,907 ವಿದ್ಯಾರ್ಥಿಗಳ ಬಳಿ ಟ್ಯಾಬ್ ಇದೆ. 51.34 ಲಕ್ಷ ವಿದ್ಯಾರ್ಥಿಗಳ ಬಳಿ ಇಂಟರ್ನೆಟ್ ಸೌಲಭ್ಯವಿದೆ. ಆದರೆ, 31,27,524 ವಿದ್ಯಾರ್ಥಿಗಳ ಬಳಿ ಯಾವುದೇ ಸ್ಮಾರ್ಟ್ ಫೋನ್ ಇಲ್ಲ. ಇದರಲ್ಲಿ ಬಹುತೇಕ ಮಂದಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ಆಗಿದ್ದಾರೆ. 37,79,965 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇತರೆ ತಾಂತ್ರಿಕ ಉಪಕರಣಗಳಿದ್ದರೂ ಇಂಟರ್‌ನೆಟ್ ಇಲ್ಲ. 81,14,097 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ ಹಾಗೂ 10,45,288 ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೋ ಇದೆ. 8,65,259 ವಿದ್ಯಾರ್ಥಿಗಳ ಮನೆಯಲ್ಲಿ ಈ ಎರಡೂ ಸೌಲಭ್ಯಗಳಿಲ್ಲ. ಇನ್ನು 4,88,826 ವಿದ್ಯಾರ್ಥಿಗಳು ಮಾತ್ರವೇ ಇ-ಮೇಲ್ ಬಳಕೆ ಮಾಡುತ್ತಿದ್ದಾರೆ.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳು..!
ಸ್ಮಾರ್ಟ್‌ಫೋನ್ ನೀಡಲು ಚಿಂತನೆ:
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಕುಟುಂಬದ ಮಕ್ಕಳ ಬಳಿ ಸ್ಮಾರ್ಟ್‌ಫೋನ್ ಇಲ್ಲ. ಕೋವಿಡ್ ವೇಳೆಯಲ್ಲಿ ಭೌತಿಕ ತರಗತಿಗಳು ಆರಂಭವಾಗದೆ ಇರುವುದರಿಂದ ಈ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಬೇಕೆಂದು ಇಲಾಖೆ ಆಲೋಚನೆ ಮಾಡುತ್ತದೆ. ಅಲ್ಲದೆ, ಸ್ಮಾರ್ಟ್‌ಫೋನ್ ನೀಡಿ ಆ ಮೂಲಕ ಖಾಸಗಿ ಶಾಲೆಗಳಂತೆಯೇ ಆನ್‌ಲೈನ್ ಕ್ಲಾಸ್ ಮಾಡಲು ಚಿಂತಿಸಿದೆ.
ಇದಕ್ಕಾಗಿ ಕೆಲವು ದಾನಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ದಾನವಾಗಿಯೂ ಪಡೆಯುತ್ತಿದೆ. ಸರ್ಕಾರದ ಹಂತದಲ್ಲೂ ಫೋನ್ ಖರೀದಿಸಲು ಚಿಂತಿಸಿದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಿಂದ ಈ ಸಮೀಕ್ಷೆ ಮಾಡಿಸಿದೆ ಎಂದು ತಿಳಿದು ಬಂದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಜು.1ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಿದೆ. ಆದರೆ, ಎಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿ, ದೂರದರ್ಶನ, ರೇಡಿಯೋ ಪಾಠಗಳನ್ನು ಪಡೆಯುವ ಅವಕಾಶವಿದೆ ಎಂದು ಸಮೀಕ್ಷೆ ನಡೆಸಿದ್ದು, ಈ ವೇಳೆ ಮಾಹಿತಿ ಬಹಿರಂಗವಾಗಿದೆ.