ಉತ್ತರ ಪ್ರದೇಶದ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ. ಹಿಂದುಳಿದ ಪ್ರದೇಶದ 12 ವಿದ್ಯಾರ್ಥಿನಿಯರು NEET-UG ಪರೀಕ್ಷೆ ಪಾಸ್ ಮಾಡಿದ್ದಾರೆ. ಅದ್ರಲ್ಲೂ ವಿಶೇಷತೆ ಇದೆ.
ಉತ್ತರ ಪ್ರದೇಶ (Uttar Pradesh)ದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಮಿರ್ಜಾಪುರ ಜಿಲ್ಲೆ ಶೈಕ್ಷಣಿಕ ಕ್ರಾಂತಿ ಮಾಡಿದೆ. 2025 ರಲ್ಲಿ ಮಿರ್ಜಾಪುರ ಜಿಲ್ಲೆಯ ಮದಿಹಾನ್ ತಹಸಿಲ್ ನ ಹನ್ನೆರಡು ಹುಡುಗಿಯರು NEET-UG ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. NEET-UG ಪರೀಕ್ಷೆ ಅಂದ್ರೆ ಮಕ್ಕಳು ಹೆದರ್ತಾರೆ. ಇಡೀ ದಿನ ವಿದ್ಯಾಭ್ಯಾಸ ಮಾಡೋ ಜೊತೆ ಲಕ್ಷಾಂತರ ರೂಪಾಯಿ ಸುರಿದು ಕೋಚಿಂಗ್ ಹೋಗ್ತಾರೆ. ಆದ್ರೆ ಈ ಹುಡುಗಿಯರ ಸಾಧನೆ ಭಿನ್ನವಾಗಿದೆ. ಅವರು ಖಾಸಗಿ ಕೋಚಿಂಗ್ ಲಕ್ಷವಿರಲಿ, ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಅವರ ಸಾಧನೆ ಸ್ಥಳೀಯ ಸಮುದಾಯವನ್ನು ಬೆರಗುಗೊಳಿಸಿದೆ. ಎಲ್ಲರ ತಾತ್ಸಾರಕ್ಕೆ ಒಳಗಾಗುವ ಸರ್ಕಾರಿ ಶಾಲೆ ಈಗ ಎಲ್ಲರ ಗಮನ ಸೆಳೆದಿದೆ.
ಜೈಪ್ರಕಾಶ್ ನಾರಾಯಣ್ ಸರ್ವೋದಯ ಬಾಲಿಕಾ ವಿದ್ಯಾಲಯ (Jaiprakash Narayan Sarvodaya Balika Vidyalaya )ದ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ. ವಾರಣಾಸಿಯ X ನವೋದಯ ಫೌಂಡೇಶನ್ನ ಶೈಕ್ಷಣಿಕ ಬೆಂಬಲದೊಂದಿಗೆ ಸಮಾಜ ಕಲ್ಯಾಣ ಇಲಾಖೆ ಈ ಶಾಲೆಯನ್ನು ನಡೆಸುತ್ತಿದೆ. ಶಾಲೆಯಲ್ಲಿ 11 ಮತ್ತು 12 ನೇ ತರಗತಿಯ ಪಠ್ಯಕ್ರಮದೊಂದಿಗೆ NEET ಮತ್ತು JEE ಆಕಾಂಕ್ಷಿಗಳಿಗೆ ಉಚಿತ ಟ್ರೈನಿಂಗ್ ನೀಡಲಾಗ್ತಿದೆ.
ಜೂನ್ 2023 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಪ್ರಕ್ರಿಯೆ ಶುರುವಾಯ್ತು. ಉತ್ತರ ಪ್ರದೇಶದ 29 ಜಿಲ್ಲೆಗಳಿಂದ ದಲಿತ ಮತ್ತು OBC ಸಮುದಾಯಗಳಿಂದ ಪ್ರತಿಭಾನ್ವಿತ ಹುಡುಗಿಯರನ್ನು ಆಯ್ಕೆ ಮಾಡಲಾಗಿತ್ತು. ಮದಿಹಾನ್ ಕೇಂದ್ರವು ವಿದ್ಯಾರ್ಥಿಗಳಿಗೆ ಉಚಿತ ವಸತಿ, ಆಹಾರ, ಶೈಕ್ಷಣಿಕ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ಮೊದಲ ಬ್ಯಾಚ್ನಲ್ಲಿ, 25 ಹುಡುಗಿಯರು NEET ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅದ್ರಲ್ಲಿ 12 ಜನರು ಉತ್ತೀರ್ಣರಾಗಿದ್ದಾರೆ. JEE ಗಾಗಿ, 13 ಹುಡುಗಿಯರು ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು ಐದು ಜನರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಾಲಕೀಯರ ಈ ರಿಸಲ್ಟ್ ಜಿಲ್ಲೆಯಾದ್ಯಂತ ವ್ಯಾಪಕ ಮನ್ನಣೆ ಗಳಿಸಿದೆ. ಇದು ಶಿಕ್ಷಣದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಸಾಧ್ಯತೆಗಳ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿವೆ.
ಸೀಮಿತ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳು ಇಲ್ಲಿಗೆ ಬರ್ತಾರೆ. NEET ತಯಾರಿಗೆ ಲಕ್ನೋದಿಂದಲೂ ವಿದ್ಯಾರ್ಥಿಗಳು ಬರ್ತಿದ್ದಾರೆ. ಸ್ನೇಹಪರ ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಓದು ಸುಲಭವಾಗ್ತಿದೆ. ಶ್ವೇತಾ ಪಾಲ್, ಪೂಜಾ ರಂಜನ್, ಪ್ರಿನ್ಸಿ, ಮಾಲ್ಟಿ, ಕೋಮಲ್ ಕುಮಾರಿ, ಲಕ್ಷ್ಮಿ, ಅನುರಾಧ, ಸಭಾ ಪ್ರಜಾಪತಿ, ದೀಪ್ತಿ ಗುಪ್ತಾ ಮತ್ತು ಪೂಜಾ ಸೋಂಕರ್ ಉತ್ತೀರ್ಣರಾದ ವಿದ್ಯಾರ್ಥಿನಿಯರು. ಇವರ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡ್ತಿದ್ದಾರೆ. ಎಲ್ಲಾ ಅನುಮಾನಗಳನ್ನು ಪರಿಹರಿಸ್ತಿದ್ದಾರೆ. ತರಗತಿ ಮುಗಿದ ನಂತರವೂ ಶಿಕ್ಷಕರು ನಮಗೆ ಸಹಾಯ ಮಾಡ್ತಾರೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ನೀಟ್ ಮತ್ತು ಜೆಇಇ ತರಬೇತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿರುವ ಈ ಸಂದರ್ಭದಲ್ಲಿ ವೆಚ್ಚವಿಲ್ಲದೆ, ಉತ್ತಮ ಶಿಕ್ಷಣ ನೀಡಿ ಅಭೂತ ಪೂರ್ಣ ಫಲಿತಾಂಶಗಳನ್ನು ಈ ಸಂಸ್ಥೆ ನೀಡಿದೆ. ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ನಂತರ ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಕೇಂದ್ರ ಬೋಧನೆ ಮತ್ತು ವಸತಿ ಸೌಲಭ್ಯಗಳನ್ನು ಇದು ನೀಡುತ್ತಿದೆ. ಇದು ಸಮಾಜದ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಇಯಂತಹ ಉನ್ನತ ಮಟ್ಟದ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತಮ ಅವಕಾಶವನ್ನು ನೀಡುತ್ತದೆ.
