ಸುಬ್ರಹ್ಮಣ್ಯ (ಮಾ.07):  ರಾಜ್ಯದಲ್ಲಿ 1 ನೇ ತರಗತಿಯಿಂದ 6 ನೇ ತರಗತಿ ಆರಂಭಕ್ಕೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹೆ ಪಡೆದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದಲ್ಲಿ ಮಾರ್ಚ್ 1 ರಿಂದಲೇ ತರಗತಿ ಆರಂಭಿಸಬೇಕಿತ್ತು. ಆದರೆ ರಾಜ್ಯದ ಕೆಲವು ಕಡೆಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ತೀರ್ಮಾನವನ್ನು ಕೈಬಿಡಲಾಗಿದೆ. ರಾಜ್ಯದಲ್ಲಿ 350 ಆಸುಪಾಸಿನಲ್ಲಿದ್ದ ಕೊರೋನಾ ಸಂಖ್ಯೆ ನಿನ್ನೆಯಿಂದ 600 ರ ಹತ್ತಿರ ಬಂದಿದೆ. ಇದರಿಂದಾಗಿ ತರಗತಿ ಆರಂಭಕ್ಕೆ ಮೊದಲು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ತೀರ್ಮಾನ ಪಡೆದುಕೊಳ್ಳಬೇಕಿದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಭೇಟಿ ನೀಡಿ ಸುಬ್ರಹ್ಮಣ್ಯ ದೇವರ ದರುಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲೂ ಇದೇ ಸಮಿತಿಯ ಸಲಹೆ ಪಡೆಯಲಾಗಿತ್ತು. ಆದರೆ ಇದೀಗ ಕೆಲವು ಕಡೆಗಳಲ್ಲಿ ಕೊರೋನಾ ಹೆಚ್ಚುತ್ತಿದೆ ಎನ್ನುವ ಕಾರಣಕ್ಕೆ ಸದ್ಯಕ್ಕೆ ತರಗತಿ ಆರಂಭವನ್ನು ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಸಲಹಾ ಸಮಿತಿ ಒಪ್ಪಿಗೆಯ ಬಳಿಕವೇ ತರಗತಿ ಆರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು; ನೋಟಿಸ್‌ಗೂ ಡೋಂಟ್ ಕೇರ್ ...

ಕೇರಳ, ಮಹಾರಾಷ್ಟ್ರ ಗಡಿ ಹಾಗೂ ಬೆಂಗಳೂರಿನಲ್ಲಿ ಶಾಲೆ ಆರಂಭಗೊಂಡಿದೆ. ಈ ಭಾಗದಲ್ಲಿ ಶೇ.80ರಷ್ಟುಹಾಜರಾತಿಯೂ ಕಂಡುಬಂದಿದೆ ಎಂದರು. ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತವಾಗುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಕಾಲೇಜು ಆರಂಭವಾಗದ ಕಾರಣ ಕೆಲವು ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಕೆಲವರು ಬಾಲ್ಯವಿವಾಹವಾಗಿ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇಂಥಹ ವಿದ್ಯಾರ್ಥಿಗಳನ್ನು ಮತ್ತೆ ಕಾಲೇಜಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದ ಸಚಿವರು, ಶಿಕ್ಷಣ, ಕಾರ್ಮಿಕ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಂಟಿಯಾಗಿ ಈ ಕುರಿತ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ವಿದ್ಯಾರ್ಥಿಗಳ ಸ್ಪಷ್ಟಮಾಹಿತಿ ಇಲಾಖೆಗೆ ಸಿಗಲಿದೆ ಎಂದರು. ಸಮೀಕ್ಷೆಯ ಬಳಿಕ ಶೀಘ್ರವೇ ವಿದ್ಯಾರ್ಥಿಗಳನ್ನು ಮತ್ತೆ ಕಾಲೇಜು ಸೇರಿಸಲು ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು.

ರಾಹುಲ್‌ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಿಲ್ಲ: ಆರ್‌ಎಸ್‌ಎಸ್‌ ನೇತೃತ್ವದ ಶಾಲೆಗಳು ಪಾಕಿಸ್ತಾನದ ಮದರಸಗಳಂತೆ ಮೂಲಭೂತವಾದವನ್ನು ಕಲಿಸುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್‌ ಕುಮಾರ್‌, ರಾಹುಲ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ಮಾತನಾಡುವ ದೇಶದ ಯಾರಾದರೂ ರಾಜಕಾರಣಿ ಇದ್ದರೆ ಅದು ರಾಹುಲ್‌ ಗಾಂಧಿ ಮಾತ್ರ ಎಂದು ವ್ಯಂಗ್ಯವಾಡಿದ ಅವರು, ಆರ್‌ಎಸ್‌ಎಸ್‌ ಏನು ಎಂದು ತಿಳಿಯಲು ಅದರ ಒಳಗೆ ನೋಡಿ ಅರಿಯಬೇಕಿದೆ. ದೇಶಾದ್ಯಂತ ಇದೀಗ ಒಂದು ದೇಶ, ಒಂದು ಚುನಾವಣೆಗೂ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲೂ ಆರ್‌ಎಸ್‌ಎಸ್‌ ಕೈವಾಡ ಹುಡುಕುತ್ತಿದ್ದಾರೆ. ಆರ್‌ಎಸ್‌ಎಸ್‌ ಭಯ ಇವರನ್ನು ಎಲ್ಲೆಡೆ ಕಾಡುತ್ತಿದೆ ಎಂದು ಕುಟುಕಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರೌಢ ಶಾಲಾ ಹಂತದಿಂದಲೇ ಅನುಷ್ಠಾನಗೊಳಿಸಲಾಗುವುದು. ಶಿಕ್ಷಣದ ಜೊತೆಗೆ ಕೌಶಲ್ಯವನ್ನೂ ನೀಡುವ ಕಾರ್ಯ ಹೈಸ್ಕೂಲ್‌ ಮಟ್ಟದಿಂದಲೇ ನಡೆಯಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.