ನವದೆಹಲಿ(ಜೂ.25): ದೇಶಾದ್ಯಂತ ಈ ವರ್ಷ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳ ಅಂತಿಮ ವರ್ಷದ ಪರೀಕ್ಷೆಗಳು ರದ್ದಾಗುವ ಸಾಧ್ಯತೆಯಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಪಡಿಸಿ, ಹಿಂದಿನ ಸೆಮಿಸ್ಟರ್‌ ಅಥವಾ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಅವರು ಪಡೆದ ಅಂಕಗಳನ್ನು ಆಧರಿಸಿ ಫಲಿತಾಂಶ ಪ್ರಕಟಿಸಿ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಸಮಿತಿ ಶಿಫಾರಸು ಮಾಡಿದೆ. ಹೊಸ ಶೈಕ್ಷಣಿಕ ವರ್ಷವನ್ನು ಅಕ್ಟೋಬರ್‌ನಿಂದ ಆರಂಭಿಸುವಂತೆಯೂ ಸಲಹೆ ಮಾಡಿದೆ. ಈ ಕುರಿತು ಮುಂದಿನ ವಾರ ಯುಜಿಸಿ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ.

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತವಾಗಿರುವುದರಿಂದ ಈ ವರ್ಷ ಉನ್ನತ ಶಿಕ್ಷಣದ ಪರೀಕ್ಷೆಗಳ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ವರದಿ ನೀಡಲು ಹರಾರ‍ಯಣ ವಿಶ್ವವಿದ್ಯಾಲಯದ ಉಪಕುಲಪತಿ ಆರ್‌.ಸಿ. ಕುಹಾದ್‌ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಯುಜಿಸಿ ರಚಿಸಿತ್ತು. ಆ ಸಮಿತಿಯು, ದೇಶಾದ್ಯಂತ ಸಾಮಾನ್ಯವಾಗಿ ಜುಲೈನಲ್ಲಿ ನಡೆಯಬೇಕಿರುವ ಅಂತಿಮ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಈ ಬಾರಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆ ರದ್ದುಪಡಿಸಿ, ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಬೇಕು. ಯಾರಿಗಾದರೂ ಈ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ ಅವರಿಗೆ ಮುಂದೆ ಕೊರೋನಾ ದೂರವಾದ ನಂತರ ಪರೀಕ್ಷೆ ನಡೆಸಬಹುದು ಎಂದು ಶಿಫಾರಸು ಮಾಡಿದೆ.

ಈ ಶಿಫಾರಸಿನನ್ವಯ ಯುಜಿಸಿ ಮುಂದಿನ ವಾರ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಪರೀಕ್ಷೆ ರದ್ದುಪಡಿಸುವ ನಿರ್ಧಾರವನ್ನು ಯುಜಿಸಿ ಕೈಗೊಂಡರೆ ದೇಶದ 40ಕ್ಕೂ ಹೆಚ್ಚು ಕೇಂದ್ರೀಯ ವಿಶ್ವವಿದ್ಯಾಲಯಗಳು, ವಿವಿಧ ರಾಜ್ಯಗಳ ನೂರಾರು ವಿವಿಗಳು, ಖಾಸಗಿ ಹಾಗೂ ಡೀಮ್‌್ಡ ವಿವಿಗಳು ಮತ್ತು ಪದವಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಪರೀಕ್ಷೆಗಳು ರದ್ದಾಗಲಿವೆ. ಇನ್ನು, ಉನ್ನತ ಶಿಕ್ಷಣದ ತರಗತಿಗಳ ಪುನಾರಂಭವನ್ನು ಅಕ್ಟೋಬರ್‌ಗೆ ಮುಂದೂಡಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ. ಈಗಾಗಲೇ ಇರುವ ವಿದ್ಯಾರ್ಥಿಗಳಿಗೆ ಆಗಸ್ಟ್‌ನಿಂದ, ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಿಂದ ಶೈಕ್ಷಣಿಕ ವರ್ಷ ಆರಂಭಿಸಲು ಈ ಹಿಂದೆ ಉದ್ದೇಶಿಸಲಾಗಿತ್ತು.