ಬೆಂಗಳೂರು, (ಜುಲೈ.13): ಕರೋನಾ ಸಂಕಷ್ಟ ಕಾಲದಲ್ಲೂ ಮಕ್ಕಳ ಕಲಿಕೆಯನ್ನು ನಿರಂತರವಾಗಿಸುವ ನಿಟ್ಟಿನಲ್ಲಿ 8ರಿಂದ 10ನೇ ತರಗತಿ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜು.20ರಿಂದ ಆ. 8ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.

ಈ ಕುರಿತು ಇಂದು (ಸೋಮವಾರ) ಸುದ್ದಿಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್​, ಮಕ್ಕಳು ಮನೆಯಲ್ಲಿ ಇದ್ದುಕೊಂಡೇ ಕಲಿಕೆಯಲ್ಲಿ ಭಾಗವಹಿಸಲು ಸಹಾಯವಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ತರಗತಿಗಳನ್ನು ನಡೆಸಲಾಗುತ್ತಿದೆ. ಯಾವ ಸಮಯಕ್ಕೆ ತರಗತಿಗಳು ಪ್ರಸಾರ ಆಗಲಿವೆ ಎಂಬ ವೇಳಾಪಟ್ಟಿಯನ್ನು ಸದ್ಯದಲ್ಲೇ ತಿಳಿಸಲಾಗುತ್ತದೆ. ಸೇತುಬಂಧ ಕಾರ್ಯಕ್ರಮದ ವಿಡಿಯೋಗಳನ್ನು ಯೂ ಟ್ಯೂಬ್​ನಲ್ಲೂ ಅಪ್​ಲೋಡ್​ ಮಾಡಲಾಗುತ್ತದೆ ಎಂದು ತಿಳಿಸಿದರು. 

ಸರ್ಕಾರದ ಆದೇಶಗಳಿಗೆ ತಡೆ ನೀಡಿ ಆನ್‌ಲೈನ್‌ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹೈಕೋರ್ಟ್

ಸೇತುಬಂಧ ಕಾರ್ಯಕ್ರಮದ ಅಡಿ ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್​, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್​, ತೃತೀಯ ಭಾಷೆ ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯವನ್ನು ಬಿತ್ತರಿಸಲಾಗುತ್ತದೆ. ಸದ್ಯ ಪ್ರೌಢಶಾಲಾ ವಿದ್ಯಾಥಿರ್ಗಳಿಗೆ ಕನ್ನಡ ಮಾಧ್ಯಮದಲ್ಲಿ ಮಾತ್ರ ತರಗತಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್​ ಎರಡೂ ಮಾಧ್ಯಮದಲ್ಲಿ ವಿಡಿಯೋ ಪಾಠಗಳನ್ನು ಶಿಕ್ಷಣ ಇಲಾಖೆ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ ಎದು​ ಹೇಳಿದರು.

ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ಪ್ರತಿ 20 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ಯಾವ ರೀತಿಯಲ್ಲಿ ಮೌಲ್ಯಮಾಪನ ಮಾಡಬೇಕು ಎಂಬುದನ್ನು ತಿಳಿಯುವುದಕ್ಕಾಗಿ ಇಲಾಖೆ ವತಿಯಿಂದ ರೂಪುರೇಷೆ ಪ್ರಕಟಿಸಲಾಗುವುದು ಎಂದರು.