ಬೆಂಗಳೂರು, (ಜುಲೈ.08): ಮಹಾಮಾರಿ ಕೊರೋನಾ ಹಾವಳಿ ಮಧ್ಯೆ ಆನ್‌ಲೈನ್‌ ಶಿಕ್ಷಣ ಬೇಕಾ? ಬೇಡ್ವಾ? ಎಂಬ ಕುರಿತು ರಾಜ್ಯದಲ್ಲಿ ಪರ-ವಿರೋಧಗಳು ಚರ್ಚೆಯಾಗುತ್ತಿವೆ. ಇದರ ಮಧ್ಯೆ  ಆನ್ ಲೈನ್ ಶಿಕ್ಷಣಕ್ಕೆ ಕರ್ನಾಟಕ ಹೈಕೋರ್ಟ್‌ ಅಸ್ತು ಎಂದಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿದ್ದ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪಿಐಎಲ್‌ ಸಲ್ಲಿಸಿದ್ದವು.

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಬೇಕೋ.? ಬೇಡ್ವೋ.? 

ಇಂದು (ಬುಧವಾರ)  ಈ ಪಿಐಎಲ್‌ ವಿಚಾರಣೆ ನಡೆಸಿದ ಸಿಜೆ ಎ.ಎಸ್‌. ಒಕಾ ನೇತೃತ್ವದ ವಿಭಾಗೀಯಪೀಠ, ಆನ್‌ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.  ಆನ್‌ ಲೈನ್‌ ಶಿಕ್ಷಣಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಇದು ಕಾನೂನು ಬಾಹಿರ. ಶಿಕ್ಷಣ ಮೂಲಭೂತ ಹಕ್ಕಾಗಿದೆ.  ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಮಾತ್ರ ನೀಡಲು ಸಾಧ್ಯವಾಗತ್ತದೆ ಎಂದು ಸ್ಪಷ್ಟಪಡಿಸಿದೆ.

 ಇನ್ನೂ ಶಾಲೆಗಳಿಂದ ಆನ್‌ಲೈನ್‌ ಮಾದರಿಯನ್ನು ಕಡ್ಡಾಯ ಮಾಡುವುದು ಅನವಶ್ಯಕ. ಇದಲ್ಲದೇ ಇದಕ್ಕಾಗಿ ಹೆಚ್ಚಿನ ಶುಲ್ಕವನ್ನು ಕೂಡ ಪಡೆಯುವಂತಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ. ಆನ್‌ಲೈನ್‌ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸರ್ಕಾರದ ನಿಲುವನ್ನು ಒಪ್ಪಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು ಅಂತಲೂ ಕೋರ್ಟ್ ಹೇಳಿದೆ.

ಸರ್ಕಾರ ಆದೇಶಗಳಿಗೆ ತಡೆ
ಸರ್ಕಾರ ಆನ್‌ಲೈನ್ ಶಿಕ್ಷಣಕ್ಕೆ ನಿರ್ಬಂಧ ಹೇರಿ ಹೊರಡಿಸಿರುವ ಆದೇಶ ಕಾನೂನುಬಾಹಿರವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜೂನ್.15 ಮತ್ತು ಜೂನ್ 27ರಂದು ಹೊರಡಿಸಿದ್ದ ಎರಡು ಆದೇಶಗಳಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಒಕಾ ಹಾಗೂ ನ್ಯಾಯಾಮೂರ್ತಿ ಋ ನಟರಾಜ್ ಅವರ ಪೀಠ ತಡೆ ನೀಡಿದೆ.

ಆನ್‌ಲೈನ್‌ ತರಗತಿಗೆ ಮಕ್ಕಳಿಂದಲೂ ವಿರೋಧ..!

ಮಹಾಮಾರಿ ಕೊರೋನಾ ಹಾವಳಿ ಮಧ್ಯೆ ಆನ್‌ಲೈನ್‌ ಶಿಕ್ಷಣ ಬೇಕಾ? ಬೇಡ್ವಾ? ಎಂಬ ಕುರಿತು ರಾಜ್ಯದಲ್ಲಿ ಪರ-ವಿರೋಧಗಳು ಚರ್ಚೆಯಾಗುತ್ತಿವೆ. ಕೆಲವರು ಮಕ್ಕಳ ಜ್ಞಾನಕ್ಕಾಗಿ ಆನ್‌ಲೈನ್‌ ಶಿಕ್ಷಣ ಬೇಕು ಎಂದಿದ್ರೆ, ಇನ್ನೂ ಕೆಲವರು ಸರಿಯಾದ ವ್ಯವಸ್ಥೆ ಇಲ್ಲದೇ ಆನ್‌ಲೈನ್ ಶಿಕ್ಷಣ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.