ಬಳ್ಳಾರಿ[ಮೇ.15]: ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ ಮಂಗಳವಾರ ನಡೆದಿದ್ದು, ರಾತ್ರಿ ವೇಳೆ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಎರಡು ಚಿನ್ನದ ಪದಕ ಪಡೆದಿದ್ದಾನೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಕೃಷಿ ಕೂಲಿಕಾರನ ಪುತ್ರ ರಮೇಶ್‌ ಅವರ ಅಧ್ಯಯನದ ಸಾಧನೆಗೆ ಸಿಕ್ಕ ಫಲಿತಾಂಶವಿದು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ನಡುವೆಯೂ ಏನಾದರೂ ಸಾಧಿಸಬೇಕು ಎಂದು ಹಠಕ್ಕೆ ಬಿದ್ದ ರಮೇಶ್‌, ಪೋಷಕರ ಬಡತನದ ಸಂಕಟ ನೀಗಿಸಲು ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಯೇ ಅಧ್ಯಯನ ನಡೆಸಿ ಕೊನೆಗೂ ತನ್ನ ಕನಸಿನಂತೆಯೇ ಎಂ.ಎ.ಕನ್ನಡ ವಿಭಾಗದಲ್ಲಿ ಮೊದಲ ರಾರ‍ಯಂಕ್‌ ಪಡೆದು ಎರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾನೆ.

ತಂದೆ ಷಣ್ಮುಖಪ್ಪ ಹಮಾಲಿ ಕಾರ್ಮಿಕ. ತಾಯಿ ದೇವಮ್ಮ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಊರಲ್ಲಿ ಪುಟ್ಟದೊಂದು ಮನೆ ಇದೆ. ಬಡತನದಿಂದಾಗಿ ರಮೇಶ್‌ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದರು.

ಕಳೆದ ಏಳು ವರ್ಷಗಳಿಂದಲೂ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಈಗಲೂ ಇದೇ ಕೆಲಸದಲ್ಲಿ ಮುಂದುವರಿದಿದ್ದೇನೆ. ಸರ್ಕಾರಿ ನೌಕರಿ ಸಿಗುವವರೆಗೂ ಸೆಕ್ಯೂರಿಟಿ ಗಾರ್ಡ್‌ ಕೆಲಸ ಬಿಡೋದಿಲ್ಲ. ಏಕೆಂದರೆ ಆ ಕೆಲಸವೇ ನನ್ನ ಮನೆಯನ್ನು ಪೋಷಿಸಿದೆ. ಅಪ್ಪ-ಅಮ್ಮನ ಬಡತನ ಒಂದಷ್ಟುನೀಗಿಸಿದೆ.

-ರಮೇಶ್‌, ಎರಡು ಚಿನ್ನದ ಪದಕ ಪಡೆದವ