ಬಾಕಿ ಇದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ರಿಸಲ್ಟ್ ಡೇಟ್ ಘೋಷಣೆ
ನಿನ್ನೆ (ಜೂನ್ 18) ಅಷ್ಟೇ ಬಾಕಿ ಇದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಫಲಿತಾಂಶ ದಿನಾಂಕವನ್ನ ಪ್ರಕಟಿಸಲಾಗಿದೆ.
ಬೆಂಗಳೂರು, (ಜೂನ್. 19): ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ದ್ವಿತೀಯ ಪಿಯುಸಿಯ 39 ವಿಷಯಗಳ ಪೈಕಿ, 26 ವಿಷಯಗಳ ಮೌಲ್ಯಮಾಪನ ಮುಗಿದಿದೆ. 9 ವಿಷಯಗಳ ತಿದ್ದುಪಡಿ ಕೊನೆಯ ಹಂತದಲ್ಲಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ಪತ್ರಿಕೆಗಳ ಮೌಲ್ಯಮಾಪನ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಆನ್‌ಲೈನ್ ಕ್ಲಾಸ್ ರದ್ದು ಅಧಿಕೃತ ಆಗಿಲ್ಲ! ಸುರೇಶ್ ಕುಮಾರ್ ಕೊಟ್ರು ಸ್ಪಷ್ಟನೆ
ಇಂಗ್ಲೀಷ್ ಭಾಷೆಯ ಮೌಲ್ಯಮಾಪನ 20 ಜಿಲ್ಲೆಗಳಲ್ಲಿ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಮೌಲ್ಯ ಮಾಪನಕ್ಕಾಗಿ ನೀಡುವ ಗೌರವ ಧನವನ್ನು ಹಿಂದಿನ ವರ್ಷಗಳಂತೆ ತಡ ಮಾಡದೇ ಶೀಘ್ರವಾಗಿ ನೀಡಲಾಗುವುದು. ಮೊದಲ ಹಂತದ ಗೌರವ ಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಾಕಿ ಇರುವ ವಿಷಯಗಳ ಮೌಲ್ಯಮಾಪನಕ್ಕಾಗಿ ಎಲ್ಲ ಮೌಲ್ಯಮಾಪಕರು ಆಗಮಿಸುವಂತೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕೊರೋನಾ ಲಾಕ್‌ಡೌನ್ ಮುಂಚೆಯೇ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಹೊರತುಪಡಿಸಿ ಇನ್ನುಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಮುಗಿದ್ದವು. ಇನ್ನೇನು ಕೊನೆಯ ಪರೀಕ್ಷೆ ಇರುವಾಗಲೇ ಲಾಕ್‌ಡೌನ್ ಘೋಷಣೆಯಾಯ್ತು.
ಈ ಹಿನ್ನೆಲೆಯಲ್ಲಿ ಬಾಕಿ ಇದ್ದ ಇಂಗ್ಲೀಷ್ ಪರೀಕ್ಷೆ ಜೂನ್ 18ಕ್ಕೆ ನಿಗದಿಪಡಿಸಿತ್ತು. ಅದರಂತೆ ದ್ವಿತೀಯ ವಿದ್ಯಾರ್ಥಿಗಳು ಕೊರೋನಾ ಭೀತಿ ನಡುವೆಯೇ ನಿನ್ನೆ (ಗುರುವಾರ) ಕೊನೆ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದಾರೆ.