ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ
ಶಿಕ್ಷಣ ನೀತಿಯಲ್ಲಿ ಮಾತೃಭಾಷೆ ಕಡ್ಡಾಯ ಮಾಡಿಲ್ಲ: ಆತಂಕ| ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ,ಡಾ.ಮನು ಬಳಿಗಾರ್| ರಾಜ್ಯ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ರಾಜ್ಯ ಸರ್ಕಾರದ ವಾದಕ್ಕೆ ಬೆಂಬಲ ಸಿಕ್ಕಿಲ್ಲ|
ಬೆಂಗಳೂರು(ಆ.05): ರಾಜ್ಯಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸಂಬಂಧ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿಗಳಾದ ಡಾ.ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಒತ್ತಾಯಿಸಿದ್ದಾರೆ.
ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಾಜ್ಯಭಾಷೆ/ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸುವುದರ ಪ್ರಸ್ತಾಪವಿದ್ದರೂ ಅದು ಕಡ್ಡಾಯವಾಗಿರದೆ ಐಚ್ಛಿಕಗೊಳಿಸಲಾಗಿದೆ. ಇದರಿಂದ ಶಿಕ್ಷಣ ಮಾಧ್ಯಮದಲ್ಲಿ ರಾಜ್ಯಭಾಷೆ/ ಮಾತೃಭಾಷೆಗೆ ಸಿಗಬೇಕಾದ ಆದ್ಯತೆ ಸಿಗುವುದಿಲ್ಲವೆಂದು ಆತಂಕ ವ್ಯಕ್ತಪಡಿಸಿ ಪತ್ರ ಬರೆಯಲಾಗಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಡಾ.ಎಸ್.ಎಲ್. ಭೈರಪ್ಪ ಮತ್ತು ಡಾ. ಚಂದ್ರಶೇಖರ ಕಂಬಾರ ಅವರು ನರೇಂದ್ರ ಮೋದಿ ಅವರಿಗೆ ‘ರಾಜ್ಯಭಾಷೆ/ಮಾತೃ ಭಾಷೆ’ ವಿಷಯವಾಗಿ ಬರೆದ ಪತ್ರವನ್ನು ಮತ್ತೆ ಉಲ್ಲೇಖಿಸಿ ರಾಜ್ಯಭಾಷೆ ಅಥವಾ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕಾದ ಅಗತ್ಯವನ್ನು ಪುನಃ ಪ್ರತಿಪಾದಿಸಲಾಗಿದೆ. ಅಲ್ಲದೆ ಸಚಿವ ಸುರೇಶ್ ಕುಮಾರ್ ಅವರಿಗೂ ಇದೇ ವಿಚಾರವಾಗಿ ಪತ್ರ ಬರೆದು ರಾಜ್ಯಭಾಷೆ ಅಥವಾ ಮಾತೃಭಾಷಾ ಮಾಧ್ಯಮ ಶಿಕ್ಷಣ ಜಾರಿ ಕುರಿತಂತೆ ಕ್ರಮಕ್ಕೆ ಮನವಿ ಮಾಡಲಾಗಿದೆ.
ಹೊಸ ಶಿಕ್ಷಣ ನೀತಿಗೆ ಕೇಂದ್ರದ ಅನುಮೋದನೆ, ಮಾತೃಭಾಷೆಯಲ್ಲಿ ಪಾಠ!
ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, ರಾಜ್ಯಭಾಷೆ/ಮಾತೃಭಾಷೆ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಬೇಕೆಂಬ ಶೀಘ್ರ ನಿರ್ಣಯ ತರಬೇಕು. ಈ ಸಂಬಂಧ ನೆರೆ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರಗಳಂತೆ ವಿಶೇಷ ಕಾನೂನು ಜಾರಿಗೊಳಿಸಿ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕಳೆದ 15 ವರ್ಷಗಳಿಂದ ಕರ್ನಾಟದಲ್ಲಿದ್ದು, ಕನ್ನಡವನ್ನು ಓದಲು, ಮಾತನಾಡಲು ಬರುವವರನ್ನಷ್ಟೇ ಉದ್ಯೋಗ ನೀಡುವಾಗ ಪರಿಗಣಿಸಬೇಕೆಂಬ ನಿಯಮವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.
ರಾಜ್ಯ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ರಾಜ್ಯ ಸರ್ಕಾರದ ವಾದಕ್ಕೆ ಬೆಂಬಲ ಸಿಕ್ಕಿಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರವು ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ನಿರ್ಧರಿಸುವ ಮೂಲಕ ರಾಜ್ಯಭಾಷೆಯ ಅಸ್ತಿತ್ವಕ್ಕೆ ಕುಠಾರಪ್ರಾಯವಾಗಿ ನಡೆದುಕೊಂಡಿದೆ ಎಂದು ದೂರಲಾಗಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಪ್ರಾದೇಶಿಕ/ ರಾಜ್ಯ (ಮಾತೃ) ಭಾಷೆಯಲ್ಲಿ ಶಿಕ್ಷಣ ಕೊಡುವ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದು ಹಾಗೂ ಅದಕ್ಕೆ ಸರ್ಕಾರ ಅನುಕೂಲ ಮಾಡಿಕೊಡುವುದು ಸಹ ಭಾಷಾವಾರು ಪ್ರಾಂತ ರಚನೆಯ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಿಕ್ಷಣ ಮಾಧ್ಯಮದ ಕುರಿತು ಗಮನಹರಿಸಿ ಪ್ರಾಥಮಿಕ ಹಂತದಲ್ಲಿಯೇ ಅಂದರೆ ಕನ್ನಡದಲ್ಲಿಯೇ ಅಥವಾ ಮಾತೃಭಾಷೆ (ಇಂಗ್ಲಿಷ್ ಹೊರತುಪಡಿಸಿ)ಯಲ್ಲಿ ಶಿಕ್ಷಣ ಕೊಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.