ಕೋಲ್ಕತ್ತಾ[ಮೇ.09]: 2019ರ ISC ಪರೀಕ್ಷೆಯಲ್ಲಿ  ದೇಶದಲ್ಲಿ 4ನೇ ಸ್ಥಾನ ಪಡೆದು, ಕೋಲ್ಕತ್ತಾದ ಟಾಪರ್ ಆಗಿರುವ ರಿಚಾ ಸಿಂಗ್ ರನ್ನು ಅಲ್ಲಿನ ಪೊಲೀಸ್ ಇಲಾಖೆ ಒಂದು ದಿನದ ಡಿಸಿಪಿಯಾಗಿ ನೇಮಕ ಮಾಡಿದೆ. 

ಜಿ. ಡಿ ಬಿಡ್ಲಾ ಸೆಂಟರ್ ಫಾರ್ ಎಜುಕೇಷನ್ ವಿದ್ಯಾರ್ಥಿನಿ ರಿಚಾ ಸಿಂಗ್ ISCಯ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 99.25ರಷ್ಟು ಅಂಕ ಗಳಿಸುವ ಮೂಲಕ ದೇಶದಲ್ಲಿ 4ನೇ ಸ್ಥಾನ ಹಾಗೂ ಕೋಲ್ಕತ್ತಾದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕೋಲ್ಕತ್ತಾದ ಟಾಪರ್ ಆಗಿ ಹೊರ ಹೊಮ್ಮಿದ ರಿಚಾಗೆ ಪೊಲೀಸ್ ಇಲಾಖೆ ಒಂದು ದಿನದ ಡಿಸಿಪಿಯಾಗುವ ಅವಕಾಶ ನೀಡಿತ್ತು. ಇದರಂತೆ ಮೇ.8ರ ಬುಧವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಡಿಸಿಪಿ ಕುರ್ಚಿ ಮೇಲೆ ಕುಳಿತು ಸೇವೆ ಸಲ್ಲಿಸಿದ್ದಾರೆ. 

ಇನ್ನು ರಿಚಾ ಸಿಂಗ್ ಗರಿಯಾಹಟ್ ಪೊಲೀಸ್ ಠಾಣೆಯ ಹೆಚ್ಚುವರಿ ಪೊಲೀಸ್ ಅಧಿಕಾರಿ ರಾಜೇಶ್ ಸಿಂಗ್ ಮಗಳು ಎಂಬುವುದು ಮತ್ತೊಂದು ಇಂಟರೆಸ್ಟಿಂಗ್ ಸಂಗತಿ. ಡಿಸಿಪಿಯಾದ ರಿಚಾ ಬಳಿ ನಿಮ್ಮ ತಂದೆಗೆ ಏನಾದರೂ ಆದೇಶ ನೀಡಲು ಬಯಸುತ್ತೀರಾ? ಎಂದು ಕೇಳಿದಾಗ. ಇನ್ನು ಮುಂದೆ ಮನೆಗೆ ಸ್ವಲ್ಪ ಬೇಗ ಬನ್ನಿ ಎಂದು ಆದೇಶಿಸಿದ್ದಾರೆ. ಡಿಸಿಪಿಯಾದ ಮಗಳು ಒಂದು ದಿನಕ್ಕೆ ತನ್ನ ತಂದೆಗೇ ಬಾಸ್ ಆಗಿದ್ದಳೆಂಬುವುದು ಉಲ್ಲೇಖನೀಯ.

ಮುಂದೆ ಇತಿಹಾಸ ಹಾಗೂ ಸಮಾಜಶಾಸ್ತ್ರದಲ್ಲಿ ವ್ಯಾಸಂಗ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಳಿಕ UPSC ಪರೀಕ್ಷೆ ನೀಡಿ ಲೋಕಸೇವಾ ಆಯೋಗದ ಅಧಿಕಾರಿಯಾಗಿ ಸಮಾಜ ಸೇವೆ ಮಾಡುವ ಹಂಬಲ ಹೊಂದಿದ್ದಾರೆ. ತನ್ನ ಮಗಳು ತನಗೆ ಬಾಸ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಿಚಾ ತಂದೆ, ಇಂದು ಬೇಗ ಮನೆಗೆ ತೆರಳಿ ಡಿಸಿಪಿ ಬಾಸ್ ನೀಡಿದ ಆದೇಶ ಪಾಲಿಸುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.