ಭುವನೇಶ್ವರ, (ಆ.29): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ನಿಗದಿಯಾಗಿರುವ ಜೆಇಇ ಮುಖ್ಯ ಪರೀಕ್ಷೆ ಮತ್ತು ತಾಂತ್ರಿಕ ಹಾಗೂ ವೈದ್ಯಕೀಯ ಕೋರ್ಸ್ ಗಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಆದ್ರೆ, ಕೇಂದ್ರ ಸರ್ಕಾರ ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಕೊನೆಗೆ ಜೆಇಇ  ಹಾಗೂ ನೀಟ್ ಪರೀಕ್ಷೆಗಳಿಗೆ ಹಾಜರಾಗುವ ನಿರ್ಗತಿಕ ಅಭ್ಯರ್ಥಿಗಳಿಗೆ ಸಾರಿಗೆ ಮತ್ತು ವಸತಿ ಸೌಕರ್ಯವನ್ನು ಒದಗಿಸಲು ಮುಂದಾಗಿದೆ. ಈ  ಬಗ್ಗೆ ಮುಖ್ಯ ಕಾರ್ಯದರ್ಶಿ ಅಸಿತ್ ಕುಮಾರ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

NEET,JEE ಪರೀಕ್ಷೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ

 ಜೆಇಇ ಮುಖ್ಯ ಪರೀಕ್ಷೆಗೆ ಒಟ್ಟು 37,000 ಅಭ್ಯರ್ಥಿಗಳು ಹಾಜರಾಗಲಿದ್ದು, ಇದಕ್ಕಾಗಿ ರಾಜ್ಯದ 7 ನಗರಗಳಲ್ಲಿ 26 ಕೇಂದ್ರಗಳಿವೆ. ಇದಲ್ಲದೆ, ಪರೀಕ್ಷಾ ಕೇಂದ್ರ ಅಥವಾ ವಸತಿ ಸೌಕರ್ಯಗಳನ್ನು ತಲುಪಲು ಸ್ವಂತ ಸಾರಿಗೆ ಇಲ್ಲದ ಅಭ್ಯರ್ಥಿಗಳು ಸರ್ಕಾರಿ ಸಾರಿಗೆ ಮತ್ತು ಸೌಕರ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬೇಕು.

ಅಭ್ಯರ್ಥಿಗಳು ಮತ್ತು ಅವರ ಪೋಷಕರ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದೆ ಅನುಕೂಲವಾಗುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಮತ್ತು ಅವರ ಪೋಷಕರು ಕೇವಲ ಪರೀಕ್ಷೆಗಳ ಪ್ರವೇಶ ಪತ್ರವನ್ನು ತೋರಿಸುವ ಮೂಲಕ ಪರೀಕ್ಷೆಗಳಿಗೆ ಮುಕ್ತವಾಗಿ ಹೋಗಬಹುದು ಎಂದು ಅಸಿತ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

JEE-NEET ವಿಚಾರದಲ್ಲೂ ರಾಜಕೀಯ ಮಾಡುತ್ತಿರುವವರು ಯಾರು? ಮೋದಿಗೆ ಬಂದ ಪತ್ರ

ಪಾಲಿಟೆಕ್ನಿಕ್ ಸಂಸ್ಥೆಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಐಟಿಐಗಳಲ್ಲಿ ಪರೀಕ್ಷಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಅಭ್ಯರ್ಥಿಗಳು ವಾಸವಿರುವ ಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ಸರ್ಕಾರ ಬಸ್ಸುಗಳನ್ನು ಒದಗಿಸುತ್ತದೆ. ಇದಕ್ಕೆ ಪ್ರತಿ ಜಿಲ್ಲೆಗೆ ಒಂದು ನೋಡಲ್ ಕೇಂದ್ರ ಗುರುತಿಸಲಾಗಿದೆ.ಅಲ್ಲದೆ, ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ವಸತಿ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

 ಜೆಇಇ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1 ರಿಂದ 6 ಮತ್ತು ನೀಟ್  ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ.