ಬೆಂಗಳೂರು, (ಜೂನ್.11): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜೀವಕ್ಕಿಂತ ಪರೀಕ್ಷೆ ಮುಖ್ಯವಲ್ಲ ಎಂದು ಕೆಲ ರಾಜ್ಯಗಳಲ್ಲಿ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.

ಆದ್ರೆ, ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಕೆಲವರು ಪರೀಕ್ಷೆ ನಡೆಸಬೇಕೆಂದರೆ, ಇನ್ನು ಕೆಲವರು ಜೀವಕ್ಕಿಂತ ಪರೀಕ್ಷೆ ಮುಖ್ಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್‌.ಸುರೇಶ್ ಕುಮಾರ್, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಕಡ್ಡಿ ಮುರಿದಂತೆ ಹೇಳಿದ್ದರು. 

ಇನ್ನು ಇದೇ ವಿಚಾರ ಇಂದು (ಬುಧವಾರ) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.  ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, SSLC ಪರೀಕ್ಷೆಗಳು ನಡೆಯಲಿವೆ.  ಅದರಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

SSLC ಪರೀಕ್ಷೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ: ಹೀಗೆ ನಡೆಯುತ್ತೆ ಪರೀಕ್ಷೆ

ನಿಗದಿಯಂತೆ ಎಸ್.ಎಸ್ ಎಲ್.ಸಿ ತರಗತಿಯ ಪರೀಕ್ಷೆಗಳು ನಡೆಯಲಿವೆ.  ಈ ಬಗ್ಗೆ ಕ್ವಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಇದೇ ಜೂನ್ 25ರಿಂದ ಜುಲೈ 3ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನು ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡಿ, ಇಂಟರ್‌ನಲ್ ಅಂಕಗಳ ಮೇಲೆ ಮುಂದಿನ ತರಗತಿ ಬಡ್ತಿ ನೀಡಲಾಗಿದೆ.