ವೈದ್ಯಕೀಯ ಸ್ನಾತಕೋತ್ತರ ಪ್ರವೇಶಕ್ಕೆ ನೀಟ್-ಪಿಜಿ ಇಲ್ಲ!| ವಿವಾದಕ್ಕೆ ಕಾರಣವಾಗಿದ್ದ ಅಂಶ ಕೈಬಿಟ್ಟಕೇಂದ್ರ ಸರ್ಕಾರ

ನವದೆಹಲಿ[ಜು.15]: ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಸೇರಲು ಬಯಸಲು ಹೊಸದಾಗಿ ಪ್ರಸ್ತಾಪಿಸಲಾಗಿದ್ದ ನೀಟ್‌-ಪಿಜಿ ಪದ್ಧತಿಯನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಬದಲು ಎಂಡಿ ಮತ್ತು ಎಂಎಸ್‌ಗೆ ಸೇರಲು ಎಂಬಿಬಿಎಸ್‌ ಫೈನಲ್‌ ಪರೀಕ್ಷೆಯ ಫಲಿತಾಂಶವನ್ನೇ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ.

ಈ ತಿದ್ದುಪಡಿಯನ್ನು ಪರಿಷ್ಕೃತ ರಾಷ್ಟೀಯ ವೈದ್ಯಕೀಯ ಆಯೋಗ ಕರಡು ಮಸೂದೆಗೆ ಸೇರಿಸಿ ಶೀಘ್ರವೇ ಸಂಪುಟದ ಮುಂದಿಡಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಸ್ವತಃ ಪ್ರಧಾನಿ ಕಚೇರಿ ಸೂಚನೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಎಂಬಿಬಿಎಸ್‌ ವಿದ್ಯಾರ್ಥಿಗಳು ನಿರಾಳರಾಗುವಂತಾಗಿದೆ.

ತಿದ್ದುಪಡಿ ಮಾಡಲಾದ ಪ್ರಸ್ತಾಪದ ಅನ್ವಯ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ, ದೇಶಾದ್ಯಂತ ಏಕರೂಪವಾಗಿ ನಡೆಸಲಾಗುವ ನ್ಯಾಷನಲ್‌ ಎಕ್ಸಿಟ್‌ ಟೆಸ್ಟ್‌ (ನೆಕ್ಸ್ಟ್‌)ನ ಫಲಿತಾಂಶವನ್ನೇ ಬಳಸಿಕೊಳ್ಳಲಾಗುವುದು. ಹೀಗಾಗಿ ವೈದ್ಯಕೀಯ ಪಿಜಿ ಸೇರ ಬಯಸುವವರು, ಎಂಬಿಬಿಎಸ್‌ ಉತ್ತೀರ್ಣರಾದ ಬಳಿಕ ಮತ್ತೊಂದು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಜೊತೆಗೆ ಎಂಬಿಬಿಎಸ್‌ ಬಳಿಕ ವೈದ್ಯಕೀಯ ಸೇವೆ ಆರಂಭಿಸಲು ಅಗತ್ಯವಿರುವ ಲೈಸೆನ್ಸ್‌ ಪಡೆಯಲು ಪ್ರತ್ಯೇಕ ಪರೀಕ್ಷೆ ಬರೆಯುವ ಅಗತ್ಯವೂ ಇಲ್ಲ. ಆದರೆ ದೆಹಲಿ ಏಮ್ಸ್‌ನ ಪಿಜಿ ಸೇರಲು ಈ ಹಿಂದೆ ಇದ್ದಂತೆ ಪ್ರತ್ಯೇಕ ಪರೀಕ್ಷೆ ಬರೆಯಬೇಕು.