Asianet Suvarna News Asianet Suvarna News

ಶಾಸಕರೇ, ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಅಭಿವೃದ್ಧಿಪಡಿಸಿ..!

ಉದ್ಯಮಿಗಳು ಹಾಗೂ ದಾನಿಗಳ ನೆರವಿನ ಮೂಲಕ ಶಾಲಾ ದತ್ತು ಯೋಜನೆಯ ಪರಿಕಲ್ಪನೆ 1970 ರಲ್ಲಿ ಚಿಗುರೊಡೆಯಿತು. ಅದೇ ಯೋಜನೆ ಮುಂದೆ ವಿಸ್ತೃತ ರೂಪ ಪಡೆದು ಹೊಸ ಕಾಯ್ದೆಯಾಯಿತು. ಆದರೆ ಈವರೆಗೂ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ಹೀಗಾಗಿ ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಈ ಯೋಜನೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ.

MLAs entrepreneurs should come forward to adopt govt schools
Author
Bengaluru, First Published Jul 24, 2020, 1:24 PM IST

ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೇಶದ ಆಶಾಕಿರಣ. ಇದು ಮಕ್ಕಳ ಬದುಕನ್ನು ರೂಪಿಸುವ ಭದ್ರ ಬುನಾದಿಯೂ ಹೌದು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಅವುಗಳ ಸಬಲೀಕರಣದಿಂದ ಮಾತ್ರ ಶಿಕ್ಷಣದಿಂದ ನಿರೀಕ್ಷಿತ ಘನೋದ್ದೇಶಗಳೆಲ್ಲ ಸಾಕಾರವಾಗಬಲ್ಲವು.

ಈ ಆಶಯಗಳೇ ನಮ್ಮ ಸಂವಿಧಾನದ ಕಲಂ 15(4) ಮತ್ತು 16(4)ರ ಆಶಯಗಳೂ ಆಗಿವೆ. ಆದರೆ, ಸ್ವಾತಂತ್ರ್ಯಾನಂತರ ಏಳು ದಶಕಗಳೇ ಕಳೆದರೂ ಈ ವಿಷಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕಟುವಾಸ್ತವ. ಹೀಗಾಗಿ ನಮ್ಮ ರಾಜ್ಯದ ಸುಮಾರು 54,000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿರುವ ಅಸಮಾನತೆಯನ್ನು ಮೀರಿ ವ್ಯವಸ್ಥೆಯ ಪುನರುತ್ಥಾನಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ.

ಪ್ರಾಥಮಿಕ ಶಿಕ್ಷಣದ ಈಗಿನ ದುರ್ಬಲ ವ್ಯವಸ್ಥೆಗೆ ಹಲವಾರು ಕಾರಣಗಳಿದ್ದರೂ ಆರ್ಥಿಕ ಮುಗ್ಗಟ್ಟು ಪ್ರಮುಖವಾಗಿ ಕಾಣುವ ಅಂಶ. ಬಜೆಟ್‌ನಲ್ಲಿ ಹಂಚಿಕೆ ಮಾಡುವ ಅನುದಾನ ಸುಮಾರು ಶೇ.85ರಷ್ಟುಸಂಬಳ ಹಾಗೂ ಸಾಮಾನ್ಯ ನಿರ್ವಹಣೆಗಾಗಿಯೇ ಖರ್ಚಾಗಿ ಅಭಿವೃದ್ಧಿಗೆ ಉಳಿಯುವ ಭಾಗ ಬಹಳ ಕಡಿಮೆ. ಇವುಗಳೊಂದಿಗೆ ಜಾಗತೀಕರಣ ಹಾಗೂ ಜಿಇಆರ್‌ ಹೆಚ್ಚಳಗಳ ಒತ್ತಡಗಳು ವ್ಯವಸ್ಥೆಯನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ಇದಕ್ಕೆ ನಮ್ಮ ಗ್ರಾಮೀಣ ಶಾಲೆಗಳು ಸಾಕ್ಷಿಯಾಗಿ ನಿಂತಿವೆ.

ಆನ್‌ಲೈನ್‌ ಕ್ಲಾಸ್: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್ ಮಿಟ್ ತರಗತಿ

ಆದರೆ, ಮಾನವ ಸಂಪನ್ಮೂಲ ಹೆಚ್ಚಿಸಲು ಮೂಲ ದ್ರವ್ಯವಾಗಿರುವ ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ಎಲ್ಲ ಕ್ಷೇತ್ರಗಳ ಜೀವಾಳವಾಗಿ, ಅಭಿವೃದ್ಧಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ಶಿಕ್ಷಣ ವ್ಯವಸ್ಥೆಯನ್ನಾಗಿ ಪರಿಗಣಿಸಬೇಕಾಗಿದೆ. ಇದಕ್ಕಾಗಿ ಈಗಿನ ನಿರ್ಬಂಧಗಳಿಂದ ಹೊರಬರಲು ಪರ್ಯಾಯ ವ್ಯವಸ್ಥೆಯೆಂದರೆ ಅದು ಶಾಲಾ ದತ್ತು ನೀತಿ.

ದತ್ತು ನೀತಿಗೆ ಬೇಕು ಹೊಸ ದಿಕ್ಕು

ಕರ್ನಾಟಕದಲ್ಲಿ ಶಾಲಾ ದತ್ತು ನೀತಿ ಅನುಷ್ಠಾನಗೊಂಡು ಸಕ್ರಿಯವಾಗಿ ನಡೆಯುತ್ತಿದ್ದರೂ ಇನ್ನೂ ಸಾಂದರ್ಭಿಕ ಒತ್ತು ಕೊಟ್ಟು ಹೊಸ ಆಯಾಮಗಳೊಂದಿಗೆ ಅದನ್ನು ವಿಸ್ತಾರಗೊಳಿಸಲು ಅವಕಾಶಗಳಿವೆ. ಉದಾಹರಣೆಗೆ, ಈವರೆಗೂ ಶಾಲಾ ದತ್ತು ನೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.

ಅಲ್ಲಿ ಶೇ.50ರಷ್ಟುಯಶಸ್ವಿಯಾಗಿ ಈ ನೀತಿ ಅನುಷ್ಠಾನವಾಗಿದೆ. ಹೀಗಾಗಿ ರಾಜ್ಯದ ಇತರೆ ಭಾಗಗಳೂ ಕೂಡ ಈ ನೀತಿಯ ಲಾಭ ಪಡೆಯಲು ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯ ಎದ್ದು ಕಾಣುತ್ತಿದೆ. ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ಹೊಸ ಆಯಾಮಗಳನ್ನು ಒಳಗೊಂಡಂತೆ ನವೀನ ಮಾದರಿಯ ಶಾಲೆಗಳನ್ನು ರೂಪಿಸಲು ಈ ನೀತಿಯಲ್ಲಿ ಸೂಕ್ತ ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಲು ಸದವಕಾಶಗಳಿವೆ.

ಉದ್ಯಮಿಗಳು ಹಾಗೂ ದಾನಿಗಳ ನೆರವಿನ ಮೂಲಕ ಶಾಲಾ ದತ್ತು ಯೋಜನೆಯ ಪರಿಕಲ್ಪನೆ 1970ರಲ್ಲಿ ಚಿಗುರೊಡೆಯಿತು. ಅದೇ ಯೋಜನೆ ಮುಂದೆ ವಿಸ್ತೃತ ರೂಪ ಪಡೆದು ಹೊಸ ಕಾಯ್ದೆಯಾಯಿತು. ದಾನಿಗಳು ಮತ್ತು ಸರ್ಕಾರದ ಮಧ್ಯೆ ಸುದೀರ್ಘ ಒಡಂಬಡಿಕೆಯ ಸ್ವರೂಪ ಪಡೆಯಿತು. ಈ ಕುರಿತು ಪ್ರಾಥಮಿಕ ಶಿಕ್ಷಣ ಇಲಾಖೆಯ ವೆಬ್‌ಸೈಟಿನಲ್ಲಿ ಸಾಕಷ್ಟುಮಾಹಿತಿಯದೆ. ಪಿಇಎಸ್‌ ವಿಶ್ವವಿದ್ಯಾಲಯವು ಈ ಯೋಜನೆಯ ಮೂಲಕ ಅನೇಕ ಶಾಲೆಗಳನ್ನು ತೊಂಭತ್ತರ ದಶಕದಲ್ಲಿ ದತ್ತು ತೆಗೆದುಕೊಂಡು ಅಭಿವೃದ್ಧಿಗಾಗಿ ಕೈಜೋಡಿಸಿದ್ದನ್ನು ವಿನಮ್ರವಾಗಿ ಸ್ಮರಿಸುತ್ತೇನೆ.

ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್‌ಫರ್ಡ್‌ಹೆ ಹೊರ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

ಸುದೀಪ್‌ರಿಂದ 4 ಶಾಲೆ ದತ್ತು

ರಾಜ್ಯದಲ್ಲಿ 2020-21ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಶಾಸಕರುಗಳಿಂದ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಘೋಷಿಸಿದ್ದರು. ಅದರಂತೆ ನಾನು ಈಗಾಗಲೇ ರಾಜ್ಯದ ಎಲ್ಲ 224 ಶಾಸಕರಿಗೆ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ಪತ್ರ ಬರೆದಿದ್ದೆ.

ನನ್ನ ಕೋರಿಕೆಗೆ ಸ್ಪಂದಿಸಿ ಮಾಗಡಿ ಶಾಸಕ ಎ.ಮಂಜುನಾಥ್‌ ಅವರು 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅಷ್ಟೇ ಅಲ್ಲ, ಕೆಲ ಗಣ್ಯ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಕೂಡ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದೆ ಬರುತ್ತಿವೆ. ಉದಾಹರಣೆಗೆ, ಖ್ಯಾತ ಚಿತ್ರನಟ ಕಿಚ್ಚ ಸುದೀಪ್‌ ಅವರು 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ರೇವಾ ಖಾಸಗಿ ವಿಶ್ವವಿದ್ಯಾಲಯವು 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಬೆಂಗಳೂರಿನ ಇನ್ನೊಂದು ಪ್ರತಿಷ್ಠಿತ ಪಿಇಎಸ್‌ ಖಾಸಗಿ ವಿಶ್ವವಿದ್ಯಾಲಯವು ಉತ್ತರ ಕರ್ನಾಟಕ ಭಾಗದ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ.

ಶಾಸಕರು ಸರ್ಕಾರಿ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದತ್ತು ತೆಗೆದುಕೊಳ್ಳತೊಡಗಿದರೆ ಅವರ ವರ್ಚಸ್ಸಿನಿಂದಾಗಿ ಇತರೆ ದಾನಿಗಳು ಸಹ ಪ್ರೇರಿತರಾಗಿ ದತ್ತು ನೀತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಶಾಸಕರು, ದಾನಿಗಳು ಏನು ಮಾಡಬೇಕು?

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗ ದತ್ತು ನೀತಿಯಲ್ಲಿರುವ 31 ಕಾರ್ಯಕ್ಷೇತ್ರಗಳೊಂದಿಗೆ ಕೆಲ ಹೊಸ ಅಂಶಗಳನ್ನೂ ಸೇರಿಸಲಾಗುತ್ತಿದೆ. ಅವು ಇಂತಿವೆ:

1. ಶಾಸಕರು ತಮ್ಮ ಕ್ಷೇತ್ರಗಳಲ್ಲಿ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, 5 ವರ್ಷದ ಕಾಲಾವಧಿಯಲ್ಲಿ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಬೇಕು.

2. ದಾನಿಗಳು, ಕಾರ್ಪೊರೇಟ್‌ ಸಂಸ್ಥೆಗಳು, ಇತರ ಸಂಸ್ಥೆಗಳು ಹಾಗೂ ಸಂಘಟನೆಗಳು ಹೊಸದಾಗಿ ಶಾಲೆಗಳನ್ನು ಭಾಗಶಃ ಅಥವಾ ಪೂರ್ಣವಾಗಿ ನಿರ್ಮಿಸಿಕೊಡಲು ಅವಕಾಶ ನೀಡಬೇಕು. ದಾನಿಗಳು ನಿರ್ಮಿಸಿ ಕೊಟ್ಟಹೊಸ ಶಾಲೆಗಳು ಅಥವಾ ಇತರೆ ಕಾರ್ಯಕ್ಷೇತ್ರಗಳಿಗೆ ಅವರ ಅಥವಾ ಅವರು ಸೂಚಿಸಿದ ಹೆಸರನ್ನು ಇಡಬಹುದಾದ ಪ್ರಸ್ತಾವನೆಯನ್ನೂ ಪರಿಗಣಿಸಿದರೆ ದತ್ತು ನೀತಿ ಇನ್ನಷ್ಟುಸಬಲವಾಗಬಹುದು.

3. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಾನವ ಸಂಪನ್ಮೂಲ ಇಲಾಖೆಗಳ ಹೊಸ ಹೊಸ ಯೋಜನೆಗಳಿಗೆ ಸ್ಪಂದನೆ ಹಾಗೂ ಅನುಷ್ಠಾನ ಕೂಡ ಸಾಧ್ಯವಾಗುವಂತೆ ಶಾಲೆಗಳನ್ನು ಸನ್ನದ್ಧ ಮಾಡಬೇಕು.

4. ಅನಿವಾಸಿ ಕನ್ನಡಿಗರಿಗಾಗಿ ವಿಶೇಷ ಯೋಜನೆಯನ್ನು ರೂಪಿಸಲು ಹೇರಳ ಅವಕಾಶಗಳಿವೆ.

5. ಮಾರ್ಗದರ್ಶಿತ್ವ (ಮೆಂಟರಿಂಗ್‌) ಪದ್ಧತಿಯನ್ನು ಹೊಸ ವಿನ್ಯಾಸಗಳೊಂದಿಗೆ ಅನುಷ್ಠಾನಗೊಳಿಸಿ, ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟುಸುಸ್ಥಿರಗೊಳಿಸಬೇಕು.

6. ಮೌಲ್ಯಾಧಾರಿತ ನೀತಿ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವ್ಯವಸ್ಥೆ ಮಾಡಬೇಕು.

ಶಾಸಕರು ಇಲ್ಲಿಯವರೆಗೆ ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣರಾಗಿದ್ದಾರೆ. ಹೀಗಾಗಿ ಶಾಲಾ ದತ್ತು ನೀತಿಯ ವಿಸ್ತೃತ ಯೋಜನೆ ಕೂಡ ಕಾರ್ಯಗತವಾಗಲು ಅವರ ನೆರವು ಅತ್ಯಗತ್ಯವಾಗಿದೆ. ಕಾರ್ಯಕ್ರಮದ ಸದೃಢ ಅನುಷ್ಠಾನಕ್ಕಾಗಿ ಅವರು ಕೂಡ ನಮಗೆ ಸಲಹೆಗಳನ್ನು ನೀಡಬಹುದು. ಶಾಸಕರ ನೆರವಿನಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪರ್ವವು ಚಳವಳಿಯಾಗಿ ರೂಪುಗೊಂಡು ಹೊಸ ಶೈಕ್ಷಣಿಕ ಮನ್ವಂತರಕ್ಕೆ ನಾಂದಿ ಹಾಡಿದರೆ ರಾಜ್ಯದ ಶಿಕ್ಷಣ ವ್ಯವಸ್ಥೆ ಹೊಸ ದಿಕ್ಕುಗಳನ್ನು ಕಾಣಲಿದೆ.

- ಪ್ರೊ.ಎಂ.ಆರ್‌.ದೊರೆಸ್ವಾಮಿ

ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ

Follow Us:
Download App:
  • android
  • ios