ಬೆಂಗಳೂರು, (ಜೂನ್.24): ನಾಳೆಯಿಂದ ಅಂದ್ರೆ ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಇದಕ್ಕೆ ಎಲ್ಲಾ ರೀತಿ ಸಿದ್ಧತೆಗಳು ಸಹ ನಡೆದಿವೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಕೆಲ ಕೆಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಹರಿಬಿಟ್ಟು, ವಿದ್ಯಾರ್ಥಿಗಳಿಗೆ ಮತ್ತಷ್ಟು ಭಯ ಹುಟ್ಟಿಸಲು ಪ್ರಯತ್ನಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಆದ್ರೆ, ವಿದ್ಯಾರ್ಥಿಗಳು ಇದ್ಯಾವುದಕ್ಕೂ ಭಯ, ಗೊಂದಲಕ್ಕೊಳಗಾಗದೇ ಪರೀಕ್ಷೆ ಬರೆದು ನಿಮ್ಮ-ನಿಮ್ಮ ಪೋಷಕರ ಆಸೆ ಈಡೇರಿಸಿ. ಅಷ್ಟಕ್ಕೂ ಈ ಕಿಡಿಗೇಡಿಗಳು ಹರಿಬಿಟ್ಟಿರುವುದು ಫೇಕ್ (ನಕಲಿ) ಇಂಗ್ಲೀಷ್ ಪ್ರಶ್ನೆ ಪತ್ರಿಕೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಸಚಿವ ಸುರೇಶ ಕುಮಾರ್ ಸ್ಪಷ್ಟನೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ವಿದ್ಯಾರ್ಥಿಗಳು ಇಂತಹ ಸುದ್ದಿಗಳಿಗೆ ಕಿವಿ  ಕೊಡಬೇಡಿ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದಿದ್ದಾರೆ.

ಸಚಿವರೇ ಸ್ಪಷ್ಟನೇ ಕೊಟ್ಟಾಗಿದೆ. ಹಾಗಾದ್ರೆ ಏಕೆ ಗೊಂದಲ..? ಇಷ್ಟು ದಿನ ಕಷ್ಟಪಟ್ಟು ಓದಿದ್ದನ್ನು ನೀರಿನಲ್ಲಿ ಹೋಮ ಮಾಡದೇ ಸುರಕ್ಷಿತವಾಗಿ ಹೋಗಿ ಪರೀಕ್ಷೆ ಬರೆದು ಬನ್ನಿ.

ಪರೀಕ್ಷೆಗೆ ಹೋಗುವಾಗ ಮಾಸ್ಕ್, ಹಾಲ್‌ ಟಿಕೆಟ್ (ಪ್ರವೇಶ ಪತ್ರ) ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯಬೇಡಿ. ಆದಷ್ಟೂ ವಿದ್ಯಾರ್ಥಿಗಳು ತಮ್ಮ-ತಮ್ಮ ಪರೀಕ್ಷಾ ಕೇಂದ್ರಕ್ಕೆ 2 ಗಂಟೆ ಮೊದಲೇ ಹೋದರೆ ಉತ್ತಮ.

ಹೋಗಿ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದು ಬನ್ನಿ...All The Best