ಬೆಂಗಳೂರು (ಆ.27): ಕೊರೋನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ನಡೆಯಬೇಕಿದ್ದ ಕಾನೂನು ಪದವಿಗಳ ಪರೀಕ್ಷೆಯನ್ನು ಬರುವ ಅಕ್ಟೋಬರ್‌ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಬುಧವಾರ ವಿಧಾನಸೌಧದಲ್ಲಿ ರಾಜ್ಯ ಕಾನೂನು ವಿವಿ ಹಾಗೂ ಕಾಲೇಜುಗಳ ಮುಖ್ಯಸ್ಥರ ಜೊತೆ ನಡೆಸಿದ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು.

ಕಾನೂನು ಪದವಿಯ ಪ್ರಥಮ ವರ್ಷದಿಂದ ನಾಲ್ಕನೆಯ ವರ್ಷದ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮಿಸ್ಟರ್‌ ಪರೀಕ್ಷೆ, ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಮುಂದಿನ ತರಗತಿಗಳ ಪ್ರವೇಶಕ್ಕೆ (ಪ್ರಮೋಟ್‌) ಅವಕಾಶ ಮಾಡಲಾಗುವುದು. ಆದರೆ, ವಿಶ್ವವಿದ್ಯಾಲಯ, ಕಾಲೇಜುಗಳು ಆರಂಭವಾದ ಬಳಿಕ ಸೆಮಿಸ್ಟರ್‌ ಪರೀಕ್ಷೆ ಬರೆಯಲೇಬೇಕಾಗುತ್ತದೆ. ಕೊನೆಯ ಸೆಮಿಸ್ಟರ್‌ ಪರೀಕ್ಷೆ ವೇಳೆಗೆ ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳನ್ನು ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾಗದಿದ್ದರೆ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಎಲ್ಲ ಸೆಮಿಸ್ಟರ್‌ ಉತ್ತೀರ್ಣರಾದರೆ ಮಾತ್ರ ಅವರಿಗೆ ಕಾನೂನು ಪದವಿ ಪ್ರಮಾಣ ಪತ್ರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಕೆ-ಸೆಟ್ ಪರೀಕ್ಷೆಗೆ ದಿನಾಂಕ ಪ್ರಕಟ: ಆಲ್‌ ದಿ ಬೆಸ್ಟ್..

ಲಾಕ್‌ಡೌನ್‌ ಕಾರಣದಿಂದ ಕಳೆದ ಮಾರ್ಚ್ ನಿಂದ ಈವರೆಗೆ ತರಗತಿಗಳು ನಡೆದಿಲ್ಲ. ಕೆಲವು ವಿದ್ಯಾರ್ಥಿಗಳು ಹಳ್ಳಿಗಳಲ್ಲಿದ್ದಾರೆ. ಕೆಲವರು ಬೇರೆ ರಾಜ್ಯಗಳಲ್ಲಿ ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಪ್ರಮೋಟ್‌ ಮಾಡಲಾಗುತ್ತಿದೆಯೇ ಹೊರತು ಉತ್ತೀರ್ಣ ಅಲ್ಲ. ಮುಂದೆ ನಡೆಸುವ ಪರೀಕ್ಷೆ ಎದುರಿಸಬೇಕು. ಸೆಪ್ಟೆಂಬರ್‌ನಿಂದ ಆನ್‌ಲೈನ್‌ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಸುಮಾರು ಒಂದೂವರೆ ಎರಡು ತಿಂಗಳ ಕಾಲ ತರಗತಿ ನಡೆಯದ ಮೂರು ತಿಂಗಳ ಅವಧಿಯ ಪಾಠವನ್ನು ಮಾಡಿ ಪರೀಕ್ಷೆಗೆ ಸಜ್ಜುಗೊಳಿಸಿ ಅಕ್ಟೋಬರ್‌ ತಿಂಗಳಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷಾ ದಿನಾಂಕಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ಸಚಿವರು ವಿವರಿಸಿದರು.

ಅಂತಿಮ ವರ್ಷದ ಕಾನೂನು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡಬೇಕೆಂದು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸ್ಪಷ್ಟವಾಗಿ ಸೂಚನೆ ನೀಡಿತ್ತು. ಈ ಸಂಬಂಧ ಅಂತಿಮ ವರ್ಷದ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿದಾಗ ಹಲವರು ವಿದ್ಯಾರ್ಥಿಗಳು ಆನ್‌ಲೈನ್‌ ಪರೀಕ್ಷೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದರು.