ಬೆಂಗಳೂರು[ಜ.27]: ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳಿಗೆ ರಾರ‍ಯಂಕಿಂಗ್‌ ನೀಡಿರುವ ಬೆನ್ನಲ್ಲೇ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಿಗೂ ರಾರ‍ಯಂಕ್‌ ನೀಡಲು ನಿರ್ಧರಿಸಿದೆ. ಗುಣಾತ್ಮಕ ಶಿಕ್ಷಣ, ಉತ್ತಮ ಮೂಲ ಸೌಕರ್ಯ ಹಾಗೂ ಉತ್ತಮ ಬೋಧನಾ ಕಾಲೇಜುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ 430 ಸರ್ಕಾರಿ, 417 ಖಾಸಗಿ ಅನುದಾನಿತ ಸೇರಿ 847 ಪ್ರಥಮ ದರ್ಜೆ ಕಾಲೇಜುಗಳಿವೆ. ಒಟ್ಟಾರೆ, 5.6 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಏಪ್ರಿಲ್‌- ಮೇ ವೇಳೆಗೆ ರಾರ‍ಯಂಕಿಂಗ್‌ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಿರುವುದಾಗಿ ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯು ರಾರ‍ಯಂಕಿಂಗ್‌ ನೀಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ರಚನೆ ಮಾಡುತ್ತಿದೆ. ಯಾವುದೇ ಖಾಸಗಿ ಸಂಸ್ಥೆಗಳ ಸಹಯೋಗ ಬಯಸದೆ ನೇರವಾಗಿ ಕಾಲೇಜು ಶಿಕ್ಷಣ ಇಲಾಖೆಯೇ ಪರಿಶೀಲನೆ ನಡೆಸಿ ರಾರ‍ಯಂಕಿಂಗ್‌ ನೀಡಲಿದೆ.

18 ಅಧಿಕಾರಿಗಳ ಸಮಿತಿ:

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್‌) ಮಾದರಿಯಲ್ಲಿ ರಾರ‍ಯಂಕ್‌ ನೀಡುವುದಕ್ಕಾಗಿ 18 ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಅಥವಾ ಆಯುಕ್ತರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರು, ಪ್ರಾಂಶುಪಾಲರು, ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತು ್ತ (ನ್ಯಾಕ್‌) ಸಂಯೋಜಕರನ್ನು ಸಮಿತಿ ಒಳಗೊಂಡಿದೆ.

ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಕೆ

ಸದ್ಯ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ವಿವಿ ಕುರಿತ ಮಾಹಿತಿ ಅಪ್‌ಲೋಡ್‌ ಮಾಡಲು ಸೂಚಿಸಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಅಪ್‌ಲೋಡ್‌ ಆದ ನಂತರ ಮಾಹಿತಿಯ ನೈಜತೆ ಪರಿಶೀಲನೆ ಮಾಡಲು ಅಧಿಕಾರಿಗಳ ತಂಡ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುತ್ತದೆ. ಇದೇ ಮಾದರಿಯನ್ನು ಕಾಲೇಜು ರಾರ‍ಯಂಕಿಂಗ್‌ ನೀಡಲು ಅನುಸರಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯ, ಕಾಲೇಜಿನಲ್ಲಿನ ಸ್ವಚ್ಛತೆ, ಬೋಧಕ-ಬೋಧಕೇತರ ಸಿಬ್ಬಂದಿ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ರಾರ‍ಯಂಕಿಂಗ್‌ ನೀಡಲಾಗುತ್ತದೆ.

ಕಾಲೇಜುಗಳಿಗೆ ರಾರ‍ಯಂಕಿಂಗ್‌ ನೀಡುವ ಸಂಬಂಧ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಸದ್ಯದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದ ಬಳಿಕ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ಆರಂಭಗೊಳ್ಳಲಿದೆ. ಮಾಹಿತಿ ಸಂಗ್ರಹವಾದ ಬಳಿಕ ರಾರ‍ಯಂಕ್‌ ನೀಡಲಾಗುತ್ತದೆ. ಇದು ನ್ಯಾಕ್‌ ರಾರ‍ಯಂಕಿಂಗ್‌ ಪಡೆಯಲು ಕಾಲೇಜುಗಳಿಗೆ ಸಹಕಾರಿಯಾಗಲಿದೆ.

- ಪ್ರೊ. ಮಲ್ಲೇಶ್ವರಪ್ಪ, ನಿರ್ದೇಶಕರು, ಕಾಲೇಜು ಶಿಕ್ಷಣ